×
Ad

ರಿಹಾನ್ನಾ ಮುಸ್ಲಿಮಳೇ?: ರೈತರ ಪ್ರತಿಭಟನೆ ಕುರಿತು ಟ್ವೀಟ್ ಮಾಡಿದ ಬಳಿಕ ಹೆಚ್ಚುತ್ತಿರುವ ಗೂಗಲ್ ಸರ್ಚ್

Update: 2021-02-03 15:50 IST

ಹೊಸದಿಲ್ಲಿ: ಟ್ವಿಟ್ಟರ್ ನಲ್ಲಿ 100 ಮಿಲಿಯನ್‍ಗೂ ಅಧಿಕ ಫಾಲೋವರ್ಸ್ ಹೊಂದಿರುವ ಪಾಪ್ ತಾರೆ ರಿಹಾನ್ನ ಅವರು ಭಾರತದಲ್ಲಿನ ರೈತ ಪ್ರತಿಭಟನೆ ಕುರಿತು ಸಿಎನ್‍ಎನ್ ಪ್ರಕಟಿಸಿದ್ದ ವರದಿಯೊಂದಿಗೆ "ಈ ಬಗ್ಗೆ ನಾವೇಕೆ ಮಾತನಾಡುತ್ತಿಲ್ಲ? #ಫಾರ್ಮರ್ಸ್‍ ಪ್ರೊಟೆಸ್ಟ್  ಎಂಬ ಟ್ವೀಟ್ ಮಾಡಿರುವುದು ದೇಶವಿದೇಶಗಳಲ್ಲಿ ಚರ್ಚೆಗೆ ಗ್ರಾಸವಾಗಿರುವಂತೆಯೇ ಹಲವರು ಈ ಟ್ವೀಟನ್ನು ಹಲವು ರೀತಿಯಲ್ಲಿ ವ್ಯಾಖ್ಯಾನಿಸಲಾರಂಭಿಸಿದ್ದಾರೆ. 

ಜತೆಗೆ ಆಕೆಯ ಬಗ್ಗೆ  ಹಲವಾರು ಮಂದಿ ಗೂಗಲ್ ಸರ್ಚ್ ಮಾಡಿ ಮಾಹಿತಿಯನ್ನೂ ಪಡೆಯಲು ಯತ್ನಿಸುತ್ತಿದ್ದು ಹೀಗೆ ರಿಹಾನ್ನ ಕುರಿತು ಗೂಗಲ್ ಸರ್ಚ್ ಮಾಡಿದವರು ಆಕೆಯ ಧರ್ಮ ಯಾವುದೆಂಬ ಕುತೂಹಲದಿಂದ "ಈಸ್ ರಿಹಾನ್ನ ಮುಸ್ಲಿಂ?''ಎಂದು ಬರೆದು ಸರ್ಚ್ ಮಾಡಿರುವುದೂ ಬೆಳಕಿಗೆ ಬಂದಿದೆ. 'ರಿಹಾನ್ನ ರಿಲಿಜನ್' ಎಂಬ ಕೀವರ್ಡ್‌ ಅನ್ನೂ ಅತೀಹೆಚ್ಚು ಮಂದಿ ಬಳಸಿದ್ದಾರೆ ಎಂದು ತಿಳಿದು ಬಂದಿದೆ.

ಬಾರ್ಬಡೋಸ್‍ನಲ್ಲಿ ಧರ್ಮದ ಮೇಲೆ ಅಪಾರ ನಂಬಿಕೆಯುಳ್ಳ ಕುಟುಂಬದಲ್ಲಿ ಬೆಳೆದಿರುವ ರಿಹಾನ್ನ ಅವರು ಚಿಕ್ಕಂದಿನಿಂದಲೇ ಕ್ರೈಸ್ತ ಧರ್ಮದ ಅನುಯಾಯಿಯಾಗಿದ್ದು ಆಕೆ ತಮ್ಮ ಧರ್ಮದ ಕುರಿತು  2019ರಲ್ಲಿಯೇ ಇಂಟರ್‍ವೀವ್ ಮ್ಯಾಗಜೀನ್ ಜತೆ ಸಾಕಷ್ಟು ಹೇಳಿಕೊಂಡಿದ್ದರು.

ಇನ್ನೊಂದೆಡೆ ರೈತರ ಪ್ರತಿಭಟನೆ ಕುರಿತು ರಿಹಾನ್ನ ಟ್ವೀಟ್ ಅನ್ನು ಹಲವರು ಹಲವು ರೀತಿಯಲ್ಲಿ ವ್ಯಾಖ್ಯಾನಿಸುತ್ತಿದ್ದಾರೆ. ಭಾರತದ ರೈತ ಪ್ರತಿಭಟನೆ ರಿಹಾನ್ನ ಟ್ವೀಟ್‍ನಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಡಲಿದೆ ಎಂದು ಕೆಲವರು ಅಭಿಪ್ರಾಯ ಪಟ್ಟರೆ ಇನ್ನು ಕೆಲವರು ಇದೊಂದು `ಪೇಯ್ಡ್' ಟ್ವೀಟ್ ಎಂದೂ ತಿಳಿದಿದ್ದಾರೆ ಹಾಗೂ ಆಕೆಗೆ ತಿಳಿಯದೇ ಇರುವ ವಿಚಾರಗಳ ಕುರಿತು ಆಕೆ ಮಾತನಾಡಬಾರದು ಎಂದು ಸಲಹೆ ನೀಡಿದವರೂ ಇದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News