×
Ad

ವಿವಾದಿತ ಬಿಗ್ ಬಾಸ್ ಸ್ಪರ್ಧಿ ಓಂ ಸ್ವಾಮಿ ನಿಧನ

Update: 2021-02-03 17:27 IST

ಹೊಸದಿಲ್ಲಿ: ಬಿಗ್ ಬಾಸ್-10ರಲ್ಲಿ ಭಾಗವಹಿಸಿ ವಿವಾದಗಳ ಮೂಲಕ ಸುದ್ದಿಯಾಗಿದ್ದ ಸ್ವಾಮಿ ಓಂ(63 ವರ್ಷ) ಬುಧವಾರ ದಿಲ್ಲಿಯಲ್ಲಿ ನಿಧನರಾದರು. 

ಕಳೆದ ಕೆಲವು ಸಮಯದಿಂದ ಅನಾರೋಗ್ಯಪೀಡಿತರಾಗಿದ್ದ ಸ್ವಾಮಿ ಓಂ ಏಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೆಲವು ದಿನಗಳ ಹಿಂದೆ ಪಾರ್ಶ್ವವಾಯು ಪೀಡಿತರಾಗಿದ್ದರು. ಅನಂತರ ಆರೋಗ್ಯ ತೀವ್ರ ಹದಗೆಟ್ಟಿದ್ದು, ಬುಧವಾರ ಕೊನೆಯುಸಿರೆಳೆದರು. ಸ್ವಾಮಿ ಓಂ ಪುತ್ರ ಅರ್ಜುನ್ ಜೈನ್ ಹಾಗೂ ಸ್ವಾಮಿ ಓಂ ಸ್ನೇಹಿತ ಮುಕೇಶ್ ಜೈನ್ ನಿಧನದ ಸುದ್ದಿಯನ್ನು ದೃಢಪಡಿಸಿದ್ದಾರೆ.

ಈ ಹಿಂದೆ ಸ್ವಾಮಿ ಓಂಗೆ ಕೊರೋನ ಸೋಂಕು ತಗಲಿತ್ತು. ಅದರಿಂದ ಗುಣಮುಖರಾಗಿದ್ದರು. ಸ್ವಾಮಿ ಓಂ ರಿಯಾಲಿಟಿ ಟಿವಿ ಕಾರ್ಯಕ್ರಮ ಬಿಗ್ ಬಾಸ್ ನಲ್ಲಿ ಭಾಗವಹಿಸುವ ಮೂಲಕ ಸುದ್ದಿಯಾಗಿದ್ದರು. ಸ್ವಾಮಿ ಓಂ ಸಹಸ್ಪರ್ಧಿಗಳಾದ ಬಾನಿ ಜೆ ಹಾಗೂ ರೋಹನ್ ಮೆಹ್ರಾ ಮೇಲೆ ಮೂತ್ರ ವಿಸರ್ಜಿಸಿದ್ದ ಆರೋಪಕ್ಕೆ ಒಳಗಾಗಿದ್ದರು. 

ಸ್ಪರ್ಧಿಗಳು ಸ್ವಾಮಿ ವಿರುದ್ದ ಬಿಗ್ ಬಾಸ್ ಗೆ ದೂರು ನೀಡಿದ್ದರು. ಈ ಘಟನೆಯ ಬಳಿಕ ಕಾರ್ಯಕ್ರಮ ನಿರ್ಮಾಪಕರು ಸ್ವಾಮಿ ಅವರನ್ನು ಬಿಗ್ ಬಾಸ್ ಮನೆಯಿಂದ ಹೊರಹಾಕಿದ್ದರು. ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕವೂ ಸ್ವಾಮಿ ವಿವಾದಿತ ವಿಚಾರದಿಂದಲೇ ಪ್ರಚಾರದಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News