×
Ad

ಟಿಆರ್‌ಪಿ, ಒಟಿಟಿಗೆ ಹೊಸ ನಿಯಮಾವಳಿ ಶೀಘ್ರ

Update: 2021-02-07 09:28 IST

ಹೊಸದಿಲ್ಲಿ, ಫೆ.7: ಟಿಆರ್‌ಪಿ ತಿರುಚುವ ಪ್ರಕರಣ ಮತ್ತು ಓಟಿಟಿ ಅಂಶಗಳ ನಿಯಂತ್ರಣ ಪ್ರಕರಣಗಳ ಹಿನ್ನೆಲೆಯಲ್ಲಿ ಇದನ್ನು ಸರಿಪಡಿಸುವ ದೃಷ್ಟಿಯಿಂದ ಹೊಸ ಮಾರ್ಗಸೂಚಿಯನ್ನು ಶೀಘ್ರವೇ ಸರಕಾರ ಪ್ರಕಟಿಸಲಿದೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

ಲೋಕಸಭೆಯಲ್ಲಿ ಸದಸ್ಯರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, "ಓವರ್ ದ ಟಾಪ್ (ಓಟಿಟಿ) ಅಂಶಗಳ ಸ್ವಯಂ ನಿಯಂತ್ರಣ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಬಗ್ಗೆ ಇಂಟರ್‌ನೆಟ್ ಮತ್ತು ಮೊಬೈಲ್ ಅಸೋಸಿಯೇಶನ್ ಆಫ್ ಇಂಡಿಯಾ (ಐಎಎಂಎಐ), ಸಚಿವಾಲಯಕ್ಕೆ ಭರವಸೆ ನೀಡಿದೆ. ಸದ್ಯಕ್ಕೆ ಡಿಜಿಟಲ್ ಅಂಶಗಳು ಕಾನೂನಾತ್ಮಕವಾಗಿ ನಿಷೇಧಿಸಲ್ಪಟ್ಟ ಅಂಶಗಳ ಬಗ್ಗೆ ಸಾಕಷ್ಟು ಗಮನಹರಿಸುತ್ತಿಲ್ಲ ಹಾಗೂ ಹಿತಾಸಕ್ತಿ ಸಂಘರ್ಷದ ಸಮಸ್ಯೆಯೂ ಇದೆ ಎಂದು ವಿವರಿಸಿದರು.

ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಓಟಿಟಿ ಪ್ಲಾಟ್‌ಫಾರ್ಮ್ ಗಳ ಜತೆ ಮತ್ತು ಐಎಎಂಎಐ ಜತೆ ಹಲವು ಸಮಾಲೋಚನಾ ಸಭೆಗಳನ್ನು ನಡಸಲಾಗಿದೆ ಎಂದು ಹೇಳಿದರು.

ಟಿಆರ್‌ಪಿ ತಿರುಚಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಿಎಆರ್‌ಸಿಯ ಪಾವಿತ್ರ್ಯವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕ್ರಮ ಕೈಗೊಂಡು ಬಿಎಆರ್‌ಸಿ ಶಿಸ್ತು ಮಂಡಳಿ ಈಗಾಗಲೇ 11 ಎಫ್‌ಐಆರ್‌ಗಳನ್ನು ದಾಖಲಿಸಿದೆ ಎಂದು ಸಚಿವಾಲಯಕ್ಕೆ ಮಾಹಿತಿ ಇದೆ. ಮಾಪನ ವಿಧಾನ, ರೇಟಿಂಗ್ ಏಜೆನ್ಸಿಗಳು ಮತ್ತು ಪರಿಶೋಧನೆಯ ಸಂಯೋಜನೆಯಲ್ಲಿನ ರಚನಾತ್ಮಕ ಬದಲಾವಣೆ ಸಂಬಂಧ ಸಚಿವಾಲಯ ನೇಮಕ ಮಾಡಿದ ಸಮಿತಿ ಶಿಫಾರಸು ಮಾಡಿದೆ ಎಂದು ಪ್ರಕಟಿಸಿದರು.

ಹಾಲಿ ಇರುವ ಮಾರ್ಗಸೂಚಿಯಲ್ಲಿ ಪ್ರೇಕ್ಷಕರ ಮಾಪನಕ್ಕೆ ಇರುವ ವಿಧಾನ, ಸಮಿತಿ ಆಯ್ಕೆ, ವೀಕ್ಷಣೆ ಪ್ಲಾಟ್‌ಫಾರ್ಮ್ ಗೌಪ್ಯತೆ ಮತ್ತು ಖಾಸಗೀತನ, ದತ್ತಾಂಶ ವಿಶ್ಲೇಷಣೆ, ಪಾರದರ್ಶಕತೆ ಮತ್ತು ವ್ಯಾಜ್ಯ ಪರಿಹಾರ ವ್ಯವಸ್ಥೆಗೆ ಹಾಲಿ ಮಾರ್ಗಸೂಚಿಯಲ್ಲಿ ಅವಕಾಶವಿದ್ದು, ಇದು ಪಾರದರ್ಶಕ ರೇಟಿಂಗ್ ವ್ಯವಸ್ಥೆಗೆ ಅಗತ್ಯವಾದ ಎಲ್ಲ ಅಂಶಗಳನ್ನು ಹೊಂದಿದೆ. ಆದಾಗ್ಯೂ ಪ್ರಸಾರ ಭಾರತಿ ಸಿಇಓ ನೇತೃತ್ವದ ಸಮಿತಿಯ ವರದಿ ಹಾಗೂ ಟಿಆರ್‌ಎಐ ಶಿಫಾರಸುಗಳ ಹಿನ್ನೆಲೆಯಲ್ಲಿ ಹಾಲಿ ಇರುವ ಮಾರ್ಗಸೂಚಿಗಳನ್ನು ವಿಶ್ಲೇಷಿಸಿ, ಮೌಲ್ಯಮಾಪನ ನಡೆಸಿ, ಯಾವುದೇ ಇತಿಮಿತಿಗಳಿದ್ದರೆ ಸರಿಪಡಿಸಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News