'ಇಬ್ಬರ' ವಿಕಾಸಕ್ಕಾಗಿ ಜನರನ್ನು ಲೂಟಿ ಮಾಡಲಾಗುತ್ತಿದೆ: ಕೇಂದ್ರದ ವಿರುದ್ಧ ರಾಹುಲ್ ಆಕ್ರೋಶ

Update: 2021-02-15 09:07 GMT

ಹೊಸದಿಲ್ಲಿ: ಸರಕಾರವು ಸಾರ್ವಜನಿಕರಿಂದ ಲೂಟಿ ಮಾಡುತ್ತಿದೆ ಹಾಗೂ ಕೇವಲ ಇಬ್ಬರ ವಿಕಾಸಕ್ಕೆ ಸಹಾಯ ಮಾಡುತ್ತಿದೆ ಎಂದು ಎಲ್ ಪಿಜಿ ಸಿಲಿಂಡರ್ ಬೆಲೆ ದಿಲ್ಲಿಯಲ್ಲಿ 50ರೂ. ಏರಿಕೆಯಾಗಿದ್ದನ್ನು ಉಲ್ಲೇಖಿಸಿ ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ.

 “ಜನತಾ ಸೇ ಲೂಟ್, ಸಿರ್ಫ್ ದೋ ಕಾ ವಿಕಾಸ್’(ಜನತೆಯ ಲೂಟಿ, ಕೇವಲ ಇಬ್ಬರ ವಿಕಾಸ)ಎಂದು ವಯನಾಡ್ ಸಂಸದ ರಾಹುಲ್ ಸುದ್ದಿ ವರದಿಯ ಕ್ಲಿಪ್ಪಿಂಗ್ ನೊಂದಿಗೆ ಹಿಂದಿಯಲ್ಲಿ ಸಂಕ್ಷಿಪ್ತವಾಗಿ ಟ್ವೀಟಿಸಿದ್ದಾರೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಅಭಿಯಾನ “ಸಬ್ ಕಾ ಸಾಥ್, ಸಬ್ ಕಾ ವಿಕಾಸ್’’-ಎಲ್ಲರನ್ನೂ ಒಳಗೊಳ್ಳುವ ಅವರ ಮಂತ್ರವನ್ನು ವ್ಯಂಗ್ಯವಾಡಿದರು.

ರಾಹುಲ್ ತಮ್ಮ ಟ್ವೀಟ್ ನಲ್ಲಿ ಇಬ್ಬರ ವಿಕಾಸಕ್ಕಾಗಿ ಎಂದು ಹೇಳಿದ್ದು ಹೆಸರನ್ನು ಹೇಳಿಲ್ಲ. ಕೈಗಾರಿಕೋದ್ಯಮಿಗಳಾದ ಅನಿಲ್ ಅಂಬಾನಿ ಹಾಗೂ ಗೌತಮ್ ಅದಾನಿಯವರನ್ನು ಉಲ್ಲೇಖಿಸಿ ರಾಹುಲ್ ಹೇಳಿರಬಹುದು ಎಂದು ಊಹಿಸಲಾಗಿದೆ.

ರಾಹುಲ್ ಅವರು ಈ ಹಿಂದೆ ಕೇಂದ್ರ ಸರಕಾರದ  ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ವಿರೋಧಿಸುವಾಗ ಅಂಬಾನಿ-ಅದಾನಿಯ ಹೆಸರನ್ನು ಹೇಳಿದ್ದರು. ಸರಕಾರವು ದೇಶದ ಇಬ್ಬರು ಶ್ರೀಮಂತರಿಗಾಗಿ ಕೆಲಸ ಮಾಡುತ್ತಿದೆ. ಸಾಮಾನ್ಯ ಜನರ ಅಭಿವೃದ್ದಿ ಮಾಡುತ್ತಿಲ್ಲ ಎಂದು ಈ ಹಿಂದೆ ಹಲವು ಬಾರಿ ರಾಹುಲ್ ಹೇಳಿದ್ದರು.

ದಿಲ್ಲಿಯಲ್ಲಿ ಸಿಲಿಂಡರ್ ಬೆಲೆ ರವಿವಾರ 50 ರೂ.ಹೆಚ್ಚಳವಾಗಿದ್ದು, ಹೊಸ ದರದ ಅನ್ವಯ 14.2ಕೆಜಿ ಎಲ್‍ಪಿಜಿ  769 ರೂ.ಗೆ ಏರಿಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News