ಮಹಾರಾಷ್ಟ್ರ:ಭೀಕರ ರಸ್ತೆ ಅಪಘಾತ 16 ಜನರ ಸಾವು,ಐವರಿಗೆ ಗಾಯ
ಮುಂಬೈ,ಫೆ.15: ಮಹಾರಾಷ್ಟ್ರದ ಜಲಗಾಂವ ಜಿಲ್ಲೆಯ ಯಾವಲ ತಾಲೂಕಿನ ಕಿನಗಾಂವ ಗ್ರಾಮದ ಸಮೀಪ ಸೋಮವಾರ ಬೆಳಗಿನ ಜಾವ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 16 ಜನರು ಸಾವನ್ನಪ್ಪಿದ್ದು,ಇತರ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಪ್ಪಾಯಿ ಸಾಗಿಸುತ್ತಿದ್ದ ಲಾರಿಯಲ್ಲಿ ಕಾರ್ಮಿಕರು ಪ್ರಯಾಣಿಸುತ್ತಿದ್ದು,ನಸುಕಿನ ಒಂದು ಗಂಟೆಯ ಸುಮಾರಿಗೆ ಕಿನಗಾಂವ ಗ್ರಾಮದ ದೇವಸ್ಥಾನವೊಂದರ ಬಳಿ ತಲುಪಿದಾಗ ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ಆರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸೇರಿದಂತೆ 16 ಜನರು ಲಾರಿಯಡಿಗೆ ಮತ್ತು ಪಪ್ಪಾಯಿ ರಾಶಿಯಡಿಗೆ ಸಿಲುಕಿ ಮೃತಪಟ್ಟಿದ್ದಾರೆ.
ಪ್ರಧಾನಿ ಕಚೇರಿಯು ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತರ ಕುಟುಂಬಗಳಿಗೆ ತಲಾ ಎರಡು ಲಕ್ಷ ರೂ. ಮತ್ತು ಗಂಭೀರವಾಗಿ ಗಾಯಗೊಂಡವರಿಗೆ ತಲಾ 50,000 ರೂ.ಗಳ ಪರಿಹಾರವನ್ನು ಪ್ರಕಟಿಸಿದೆ.
ಮಹಾರಾಷ್ಟ್ರ ಸರಕಾರವೂ ಪ್ರತ್ಯೇಕವಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಮೃತರ ಕುಟುಂಬಗಳಿಗೆ ತಲಾ ಎರಡು ಲ.ರೂ.ಗಳ ಪರಿಹಾರವನ್ನು ಘೋಷಿಸಿದೆ.