ಪತ್ರಕರ್ತ ಸಿದ್ದೀಕ್ ಕಪ್ಪನ್ ರಿಗೆ 5 ದಿನಗಳ ಷರತ್ತುಬದ್ಧ ಜಾಮೀನು ನೀಡಿದ ಸುಪ್ರೀಂಕೋರ್ಟ್
ಹೊಸದಿಲ್ಲಿ: ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಘಟನೆಯನ್ನು ವರದಿ ಮಾಡಲು ಉತ್ತರಪ್ರದೇಶದ ಹಾಥರಸ್‌ಗೆ ತೆರಳುತಿದ್ದಾಗ ಬಂಧಿತರಾಗಿದ್ದ ಕೇರಳದ ಪತ್ರಕರ್ತ ಸಿದ್ದೀಕ್ ಕಪ್ಪನ್‌ಗೆ ತನ್ನ ಅಸ್ವಸ್ಥ ತಾಯಿಯನ್ನು ಭೇಟಿಯಾಗಲು ಸುಪ್ರೀಂ ಕೋರ್ಟ್ ಷರತ್ತಿನೊಂದಿಗೆ 5 ದಿನಗಳ ಜಾಮೀನು ನೀಡಿದೆ.
ಭೇಟಿ ವೇಳೆ ಕಪ್ಪನ್ ಮಾಧ್ಯಮದೊಂದಿಗೆ ಮಾತನಾಡಬಾರದು ಅಥವಾ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲು ಸಾಧ್ಯವಿಲ್ಲ. ಸಂಬಂಧಿಕರು, ವೈದ್ಯರು ಹಾಗೂ ತಾಯಿಯ ಆರೋಗ್ಯಕ್ಕೆ ಸಂಬಂಧಿಸಿದ ವ್ಯಕ್ತಿಗಳನ್ನು ಹೊರತುಪಡಿಸಿ ಯಾರನ್ನೂ ಭೇಟಿಯಾಗಲು ಅವಕಾಶವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಕಪ್ಪನ್ ಅವರಿಗೆ ಪೊಲೀಸರು ಬೆಂಗಾವಲು ನೀಡಲಿದ್ದಾರೆ. ಅವರ ಪ್ರಯಾಣಕ್ಕೆ ವ್ಯವಸ್ಥೆ ಮಾಡುವುದು ಉತ್ತರಪ್ರದೇಶ ಪೊಲೀಸರ ಜವಾಬ್ದಾರಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ವೀಡಿಯೊ ಕಾಲ್ ಮುಖಾಂತರ ತಾಯಿಯೊಂದಿಗೆ ಮಾತನಾಡಲು ಕಪ್ಪನ್ ಅವರಿಗೆ ಸುಪ್ರೀಂ ಕೋರ್ಟ್ ಕಳೆದ ತಿಂಗಳು ಅವಕಾಶ ನೀಡಿತ್ತು. ಆದರೆ, ಕೇರಳದ ಮುಲಪ್ಪುರಂನ ಆಸ್ಪತ್ರೆಯಲ್ಲಿ ಪ್ರಜ್ಞೆ ಕಳೆದುಕೊಂಡಿರುವ ತಾಯಿಯೊಂದಿಗೆ ಮಾತನಾಡಲು ಕಪ್ಪನ್ ಅವರಿಗೆ ಸಾಧ್ಯವಾಗಿರಲಿಲ್ಲ.