ಕ್ರಿಕೆಟಿಗ ಚಾಹಲ್ ಕುರಿತು ʼಜಾತಿನಿಂದನೆʼ ಪದಬಳಕೆ: ಯುವರಾಜ್ ಸಿಂಗ್ ವಿರುದ್ಧ ದೂರು ದಾಖಲು
ಹಿಸಾರ್, ಹರಿಯಾಣ: ಇನ್‍ಸ್ಟಾಗ್ರಾಂ ಲೈವ್ ವೀಡಿಯೋವೊಂದರಲ್ಲಿ ತಾವು ಕ್ರಿಕೆಟಿಗ ಯುಜವೇಂದ್ರ ಚಾಹಲ್ ಕುರಿತಂತೆ ನೀಡಿದ್ದ ʼಉದ್ದೇಶಪೂರ್ವಕವಲ್ಲದ ಹೇಳಿಕೆʼ ಯೊಂದಕ್ಕೆ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರು ಕ್ಷಮೆಯಾಚಿಸಿದ ಒಂಬತ್ತು ತಿಂಗಳ ನಂತರ ಹಿಸಾರ್‍ನ ದಲಿತ ಹೋರಾಟಗಾರರೊಬ್ಬರು ಅವರ ವಿರುದ್ಧ ನೀಡಿದ ದೂರಿನ ಆಧಾರದಲ್ಲಿ ಎಫ್‍ಐಆರ್ ದಾಖಲಾಗಿದೆ. ಯುವರಾಜ್ ಅವರು ಚಾಹಲ್ ವಿರುದ್ಧ ಜಾತಿನಿಂದನೆ ಪದಗಳನ್ನು ಬಳಸಿದ್ದಾರೆಂದು ಆರೋಪಿಸಲಾಗಿದೆ.
ಮಾಜಿ ಸಹೋದ್ಯೋಗಿ ರೋಹಿತ್ ಶರ್ಮ ಜತೆ ತಾವು ಜೂನ್ 2020ರಲ್ಲಿ ಮಾಡಿದ್ದ ಇನ್‍ಸ್ಟಾಗ್ರಾಂ ಲೈವ್ ವೀಡಿಯೋದಲ್ಲಿನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಯುವರಾಜ್ ಹೇಳಿದ್ದರು. ಈ ವೀಡಿಯೋ ಅಂತರ್ಜಾಲದಲ್ಲಿ ಬಹಳಷ್ಟು ಹರಿದಾಡಿತ್ತಲ್ಲದೆ ಸಾಕಷ್ಟು ಆಕ್ರೋಶಕ್ಕೂ ಕಾರಣವಾಗಿತ್ತು. ವೀಡಿಯೋದಲ್ಲಿ ಯುವರಾಜ್ ಹಾಗೂ ರೋಹಿತ್ ಶರ್ಮ ಅವರು ಚಾಹಲ್ ಅವರ ಟಿಕ್ ಟಾಕ್ ವೀಡಿಯೊಗಳ ಕುರಿತು ಚರ್ಚಿಸುತ್ತಿದ್ದರು.
ರವಿವಾರ ದಲಿತ ಹೋರಾಟಗಾರರೊಬ್ಬರು ಹಿಸಾರ್‍ನಲ್ಲಿ ಯುವರಾಜ್ ವಿರುದ್ಧ ದಾಖಲಿಸಿರುವ ಪೊಲೀಸ್ ದೂರಿನಲ್ಲಿ ಯುವರಾಜ್ ಅವರನ್ನು ಬಂಧಿಸುವಂತೆ ಹಾಗೂ ಪರಿಶಿಷ್ಟ ಜಾತಿ, ಪಂಗಡ ದೌರ್ಜನ್ಯ ತಡೆ ಕಾಯಿದೆಯಂತೆ ಅವರ ವಿರುದ್ಧ ಪ್ರಕರಣ ದಾಖಲಿಸುವಂತೆ ಕೋರಿದ್ದಾರೆ. ಎಫ್‍ಐಆರ್‍ನಲ್ಲಿ ಯುವರಾಜ್ ವಿರುದ್ಧ ಐಪಿಸಿ ಸೆಕ್ಷನ್ 153, 153ಎ, 295, 505 ಹಾಗೂ ಪರಿಶಿಷ್ಟ ಜಾತಿ ಪಂಗಡಗಳ ಕಾಯಿದೆ ಸೆಕ್ಷನ್ 3(1) (ಆರ್) ಹಾಗೂ 3(1)(ಎಸ್) ಅನ್ವಯ ದಾಖಲಿಸಲಾಗಿದೆ.
ಕಳೆದ ವರ್ಷದ ಜೂನ್‍ನಲ್ಲಿ ಹಿಸಾರ್‍ನ ವಕೀಲರೊಬ್ಬರೂ ಯುವರಾಜ್ ವಿರುದ್ಧ ದೂರು ದಾಖಲಿಸಿದ್ದರು.
ತಾವು ಯಾರ ಭಾವನೆಗಳನ್ನು ನೋಯಿಸಿದ್ದರೆ ವಿಷಾದಿಸುವುದಾಗಿ ಹಾಗೂ ಭಾರತ ಹಾಗೂ ಭಾರತದ ಜನರ ಮೇಲೆ ತಮ್ಮ ಪ್ರೀತಿ ಅಜರಾಮರ ಎಂದು ಯುವರಾಜ್ ತಮ್ಮ ಹೇಳಿಕೆಯಲ್ಲಿ ನಂತರ ತಿಳಿಸಿದ್ದರು.