ಅಲ್ಪಸಂಖ್ಯಾತರ ಆಯೋಗದಲ್ಲಿ ಹೆಚ್ಚಿನ ಹುದ್ದೆಗಳೇಕೆ ಖಾಲಿಯಿವೆ?: ಕೇಂದ್ರಕ್ಕೆ ದಿಲ್ಲಿ ಹೈಕೋರ್ಟ್ ಪ್ರಶ್ನೆ

Update: 2021-02-15 17:01 GMT

ಹೊಸದಿಲ್ಲಿ,ಫೆ.15: ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಏಳು ಹುದ್ದೆಗಳ ಪೈಕಿ ಆರು ಹುದ್ದೆಗಳು ಕಳೆದ ವರ್ಷದ ಅಕ್ಟೋಬರ್‌ನಿಂದಲೂ ಖಾಲಿಯಾಗಿಯೇ ಉಳಿದಿರುವುದಕ್ಕೆ ವಿವರಣೆ ನೀಡುವಂತೆ ದಿಲ್ಲಿ ಉಚ್ಚ ನ್ಯಾಯಾಲಯವು ಸೋಮವಾರ ಕೇಂದ್ರ ಸರಕಾರಕ್ಕೆ ಸೂಚಿಸಿದೆ.

ಹುದ್ದೆಗಳ ಭರ್ತಿಯನ್ನು ಕೋರಿ ಅಭಯ ರತ್ನ ಬೌದ್ಧ ಎನ್ನುವವರು ಸಲ್ಲಿಸಿರುವ ಅರ್ಜಿಗೆ ಉತ್ತರವಾಗಿ ಹತ್ತು ದಿನಗಳಲ್ಲಿ ಸ್ಥಿತಿಗತಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ನ್ಯಾ.ಪ್ರತಿಭಾ ಎಂ.ಸಿಂಗ್ ಅವರು ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯಕ್ಕೆ ನಿರ್ದೇಶ ನೀಡಿದರು.

ಆಯೋಗದಲ್ಲಿಯ ಏಳು ಹುದ್ದೆಗಳ ಪೈಕಿ ಆರು ಹುದ್ದೆಗಳು ಖಾಲಿಯಿರುವುದಕ್ಕೆ ಸಚಿವಾಲಯವು ವಿವರಣೆ ನೀಡಬೇಕು ಎಂದ ನ್ಯಾಯಾಲಯವು,ಅಷ್ಟೊಂದು ಹುದ್ದೆಗಳು ಖಾಲಿ ಇರುವಂತಿಲ್ಲ ಎಂದು ಹೇಳಿತು.

2020,ಎಪ್ರಿಲ್‌ನಿಂದಲೇ ಆಯೋಗದಲ್ಲಿ ಹುದ್ದೆಗಳು ತೆರವುಗೊಳ್ಳತೊಡಗಿದ್ದವು ಮತ್ತು 2020,ಅಕ್ಟೋಬರ್‌ನಿಂದ ಉಪಾಧ್ಯಕ್ಷರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಅರ್ಜಿಯಲ್ಲಿ ಹೇಳಿರುವ ಅರ್ಜಿದಾರರು,ಪರಿಸ್ಥಿತಿಯನ್ನು ಸಚಿವಾಲಯದ ಗಮನಕ್ಕೆ ತರಲಾಗಿತ್ತಾದರೂ ಸರಕಾರವು ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News