ಕೋವಿಡ್ ಲಸಿಕೆಗಳನ್ನು ಬಾಚಿಕೊಳ್ಳುತ್ತಿರುವ ಶ್ರೀಮಂತ ದೇಶಗಳು: ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೀಕೆ

Update: 2021-02-23 16:06 GMT

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಫೆ. 23: ಕೊರೋನ ವೈರಸ್ ಲಸಿಕೆಗಳನ್ನು ಬಾಚಿಕೊಳ್ಳುತ್ತಿರುವುದಕ್ಕಾಗಿ ಹಾಗೂ ಅವುಗಳನ್ನು ಪಡೆಯುವ ಬಡ ದೇಶಗಳ ದಾರಿಯಲ್ಲಿ ಅಡಚಣೆ ಉಂಟು ಮಾಡುತ್ತಿರುವುದಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆಯು ಸೋಮವಾರ ಶ್ರೀಮಂತ ದೇಶಗಳನ್ನು ತರಾಟೆಗೆ ತೆಗೆದುಕೊಂಡಿದೆ.

ಕೆಲವು ಶ್ರೀಮಂತ ದೇಶಗಳು ಕೊರೋನ ವೈರಸ್ ಲಸಿಕೆಗಳ ಉತ್ಪಾದಕರೊಂದಿಗೆ ನೇರವಾಗಿ ವ್ಯವಹರಿಸುತ್ತಿವೆ. ಹಾಗಾಗಿ, ಬಡ ದೇಶಗಳಿಗೆ ಲಸಿಕೆ ವಿತರಿಸುವ ಉದ್ದೇಶದ ವಿಶ್ವ ಆರೋಗ್ಯ ಸಂಸ್ಥೆಯ ಕೋವ್ಯಾಕ್ಸ್ ಕಾರ್ಯಕ್ರಮಕ್ಕೆ ಹಿನ್ನಡೆಯಾಗಿದೆ. ಲಸಿಕೆ ತಯಾರಕ ಕಂಪೆನಿಗಳೊಂದಿಗೆ ಪೂರ್ವ ಒಪ್ಪಂದ ಮಾಡಿಕೊಂಡಿದ್ದರೂ, ಕೋವ್ಯಾಕ್ಸ್‌ಗೆ ಪೂರೈಸಲಾಗುತ್ತಿರುವ ಲಸಿಕೆಗಳ ಪ್ರಮಾಣದಲ್ಲಿ ಕಡಿತವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರಾಸ್ ಅದನಾಮ್ ಗೇಬ್ರಿಯೇಸಸ್ ಹೇಳಿದರು.

ಅಮೆರಿಕ, ಯುರೋಪಿಯನ್ ಒಕ್ಕೂಟ ಮತ್ತು ಜರ್ಮನಿ ಹೊಸದಾಗಿ ದೇಣಿಗೆಗಳನ್ನು ನೀಡಿದ ಬಳಿಕ, ಅತ್ಯಂತ ಬಡ ದೇಶಗಳಿಗಾಗಿ ಲಸಿಕೆಗಳನ್ನು ಖರೀದಿಸಲು ಹಣ ಲಭ್ಯವಾಗಿದೆ ಎಂದು ಅವರು ತಿಳಿಸಿದರು. ಆದರೆ, ಖರೀದಿಗೆ ಲಸಿಕೆಯೇ ಲಭ್ಯವಿಲ್ಲದಿದ್ದರೆ, ಹಣ ಇದ್ದೂ ವ್ಯರ್ಥ ಎಂದರು.

ಔಷಧ ತಯಾರಿಕಾ ಕಂಪೆನಿಗಳೊಂದಿಗೆ ತಾವು ಮಾಡಿಕೊಂಡಿರುವ ನೇರ ಒಪ್ಪಂದಗಳು ಕೋವ್ಯಾಕ್ಸ್ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತಿವೆಯೇ ಎನ್ನುವುದನ್ನು ಪರಿಶೀಲಿಸುವಂತೆ ಟೆಡ್ರಾಸ್ ಶ್ರೀಮಂತ ದೇಶಗಳನ್ನು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News