ದಲಿತರ ಮದುವೆ ದಿಬ್ಬಣದ ಮೇಲೆ ಸವರ್ಣೀಯರ ಗುಂಪಿನಿಂದ ಕಲ್ಲೆಸೆತ

Update: 2021-02-24 15:03 GMT
ಸಾಂದರ್ಭಿಕ ಚಿತ್ರ

ಅಹ್ಮದಾಬಾದ್,ಫೆ.24: ದಲಿತ ಯುವಕನೊಬ್ಬನ ಮದುವೆ ದಿಬ್ಬಣದ ಮೇಲೆ ಸವರ್ಣೀಯರ ಗುಂಪೊಂದು ಕಲ್ಲೆಸೆದ ಘಟನೆ ಗುಜರಾತ್‌ನ ಅರಾವಳಿ ಜಿಲ್ಲೆಯ ಲಿಂಚ್ ಗ್ರಾಮದಲ್ಲಿ ಬುಧವಾರ ವರದಿಯಾಗಿದೆ. ವರನ ಬಂಧುಗಳು ಸಾಂಪ್ರದಾಯಿಕ ಪೇಟಾ ಧರಿಸಿರುವುದನ್ನು ಹಾಗೂ ಡಿಜೆ ಸಂಗೀತವನ್ನು ಬಳಸಿದ್ದನ್ನು ಆಕ್ಷೇಪಿಸಿ ದುಷ್ಕರ್ಮಿಗಳು ದಿಬ್ಬಣದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿ ವಧುವಿನ ಸೋದರ ಸಂಬಂಧಿ ಪೊಲೀಸರಿಗೆ ದೂರು ನೀಡಿದ್ದಾರೆ.

ಸಮೀಪದ ಬಾಯಾಡ್ ಪಟ್ಟಣದಲ್ಲಿ ಮಂಗಳವಾರ ಸಂಜೆ ವಿವಾಹ ಸಮಾರಂಭ ನಡೆಯಲಿದ್ದುದರಿಂದ ವರನ ದಿಬ್ಬಣವು ಅಂದು ಬೆಳಗ್ಗೆ ಲಿಂಚ್ ಗ್ರಾಮದಿಂದ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿ ರಜಪೂತ ಸಮುದಾಯದ 9 ಮಂದಿಯನ್ನು ಬಂಧಿಸಲಾಗಿದೆಯೆಂದು ಅಂಬಲಿಯಾರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆರ್.ಎಂ. ದಾಮೋರ್ ತಿಳಿಸಿದ್ದಾರೆ.

ಮದುವೆ ದಿಬ್ಬಣದಲ್ಲಿದ್ದ ದಲಿತ ಪುರುಷರು ಹಾಗೂ ಮಹಿಳೆಯರು ಸಫಾ (ಸಾಂಪ್ರದಾಯಿಕ ಪೇಟಾ) ಧರಿಸುವುದನ್ನು ಆರೋಪಿಗಳು ಆಕ್ಷೇಪಿಸಿದ್ದರು ಹಾಗೂ ದಿಬ್ಬಣದ ಮೇಲೆ ಕಲ್ಲೆಸೆದರು ಹಾಗೂ ಜಾತಿನಿಂದನೆ ಮಾಡಿದ್ದಾರೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಗಳಲ್ಲಿ ಒಬ್ಬಾತ ವಧುವಿನ ಬಂಧುವಿನ ಮೇಲೂ ಹಲ್ಲೆ ನಡೆಸಿದ್ದಾನೆಂದು ಅವರು ಹೇಳಿದ್ದಾರೆ.

ಆರೋಪಿಗಳು ವರನ ಕುಟುಂಬಿಕರು ಹಾಗೂ ಇತರರಿಗೆ ಸಾಂಪ್ರಾದಾಯಿಕ ಪೇಟಾ ಗಳನ್ನು ಧರಿಸದಂತೆ ಹಾಗೂ ಡಿಜೆ ಸಂಗೀತ ಹಾಕದಂತೆ ಸೂಚಿಸಿದರು, ತನಗೆ ಹಾಗೂ ಆತನ ಕುಟುಂಬ ಸದಸ್ಯರಿಗೂ ಅವರು ಕೊಲೆ ಬೆದರಿಕೆಗಳನ್ನು ಹಾಕಿದ್ದಾರೆಂದು ವಧುವಿನ ಸೋದರಸಂಬಂಧಿ ದೂರಿನಲ್ಲಿ ತಿಳಿಸಿದ್ದಾರೆಂದು ದಾಮೋರ್ ತಿಳಿಸಿದ್ದಾರೆ.

9 ಮಂದಿ ಆರೋಪಿಗಳ ವಿರುದ್ಧ ಭಾರತೀಯ ದಂಡಸಂಹಿತೆಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಬುಡಕಟ್ಟು (ದೌರ್ಜನ್ಯಗಳ ತಡೆ ) ಕಾಯ್ದೆಯ ವಿವಿಧ ನಿಯಮ ಗಳಡಿಯಲ್ಲಿ ಗಲಭೆ ಕೃತ್ಯ, ಹಲ್ಲೆ, ಕ್ರಿಮಿನಲ್ ಬೆದರಿಕೆಯ ಆರೋಪಗಳನ್ನು ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News