ಬಂಧಿತ ರೈತರ ಬಿಡುಗಡೆಗಾಗಿ ಸಂಯುಕ್ತ ಕಿಸಾನ್ ಮೋರ್ಚಾದಿಂದ ರಾಷ್ಟ್ರಪತಿಗೆ ಪತ್ರ

Update: 2021-02-25 04:17 GMT
ರಾಮನಾಥ್ ಕೋವಿಂದ್

ಹೊಸದಿಲ್ಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ವೇಳೆ ಪೊಲೀಸರು ಬಂಧಿಸಿದ ಎಲ್ಲರನ್ನು ಬೇಷರತ್ ಆಗಿ ಬಿಡುಗಡೆ ಮಾಡಬೇಕು ಮತ್ತು ರೈತರ ವಿರುದ್ಧ ದಾಖಲಿಸಿರುವ ಸುಳ್ಳು ಆರೋಪಗಳನ್ನು ತಕ್ಷಣ ವಾಪಾಸು ಪಡೆಯಬೇಕು ಎಂದು ಸಂಯುಕ್ತ ಕಿಸಾನ್ ಮೋರ್ಚಾ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದಿದೆ.

ಪ್ರತಿಭಟನಾನಿರತ ರೈತರಿಗೆ ಪೊಲೀಸರು ಮತ್ತು ತನಿಖಾ ಏಜೆನ್ಸಿಗಳು ನೋಟಿಸ್ ನೀಡುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.

"ಸಂಯುಕ್ತ ಕಿಸಾನ್ ಮೋರ್ಚಾ ಅಡಿಯಲ್ಲಿ ರೈತರು ಕಳೆದ ಮೂರು ತಿಂಗಳಿಂದ ಪ್ರತಿಭಟನೆ ನಡೆಸುತ್ತಿದ್ದೇವೆ. ಆದರೆ ನೂರಾರು ಮಂದಿ ರೈತರು ಮತ್ತು ಹೋರಾಟ ಬೆಂಬಲಿಸಿದವರನ್ನು ಭಾರತ ಸರ್ಕಾರ ಮತ್ತು ಕೆಲ ರಾಜ್ಯ ಸರ್ಕಾರಗಳು ಜೈಲಿಗೆ ತಳ್ಳಿವೆ. ಜತೆಗೆ ಅವರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿದೆ" ಎಂದು ಎಸ್‌ಕೆಎಂ ಬರೆದ ಪತ್ರದಲ್ಲಿ ವಿವರಿಸಲಾಗಿದೆ. ಅಮಾಯಕ ರೈತರನ್ನು ಬೇಷರತ್ತಾಗಿ ಜೈಲುಗಳಿಂದ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದೆ.

ದಮನ ಪ್ರತಿರೋಧ ದಿನವನ್ನಾಗಿ ಬುಧವಾರವನ್ನು ಆಚರಿಸಿದ ರೈತರು ಈ ಸಂಬಂಧ ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ. ಏತನ್ಮಧ್ಯೆ ಟೂಲ್ ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಬಂಧಿಸಿದ್ದ ಪರಿಸರ ಹೋರಾಟಗಾರ್ತಿ ದಿಶಾ ರವಿ ಅವರನ್ನು ಬಿಡುಗಡೆ ಮಾಡಿರುವ ಕ್ರಮವನ್ನು ಎಸ್‌ಕೆಎಂ ಸ್ವಾಗತಿಸಿದೆ. ಕೋರ್ಟ್ ಜಾಮೀನು ನೀಡಿದ ಆಧಾರದಲ್ಲಿ ದಿಶಾ ರವಿ ಅವರನ್ನು ಮಂಗಳವಾರ ರಾತ್ರಿ ಬಿಡುಗಡೆ ಮಾಡಲಾಗಿತ್ತು.

"ಹಲವು ನಿಯಮಗಳನ್ನು ಉಲ್ಲಂಘಿಸಿ ದಿಶಾ ರವಿ ಅವರನ್ನು ಅಸಂವಿಧಾನಿಕ ಮತ್ತು ಅಕ್ರಮವಾಗಿ ಬಂಧಿಸಿದ ದೆಹಲಿ ಪೊಲೀಸರ ಮೇಲೆ ತಕ್ಷಣ ಕ್ರಮ ಕೈಗೊಳ್ಳಬೇಕು" ಎಂದೂ ಎಸ್‌ಕೆಎಂ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News