ಟೂಲ್ ಕಿಟ್ ಪ್ರಕರಣ: ಶಂತನು ಮುಲುಕ್ ಗೆ ಮಾ.9ರ ತನಕ ಬಂಧನದಿಂದ ರಕ್ಷಣೆ ನೀಡಿದ ನ್ಯಾಯಾಲಯ

Update: 2021-02-25 07:15 GMT

ಹೊಸದಿಲ್ಲಿ: ಟೂಲ್ ಕಿಟ್ ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿ ನ್ಯಾಯಾಲಯವು ಗುರುವಾರ ಶಂತನು ಮುಲಿಕ್ ಗೆ ಮಾರ್ಚ್ 9ರ ತನಕ ಬಂಧನದಿಂದ ರಕ್ಷಣೆ ಒದಗಿಸಿದೆ ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.

ದಿಶಾ ರವಿಯ ಜೊತೆಗೆ ಮುಲುಕ್ ಕೂಡ ರೈತರ ಪ್ರತಿಭಟನೆಗೆ ಸಂಬಂಧಿಸಿದ ಟೂಲ್ ಕಿಟ್ ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಆರೋಪ ಎದುರಿಸುತ್ತಿದ್ದಾರೆ.

ಮುಲುಕ್ ಅವರ ನಿರೀಕ್ಷಣಾ ಜಾಮೀನು ಮನವಿಗೆ ವಿವರವಾದ ಉತ್ತರ ನೀಡಲು ಇನ್ನಷ್ಟು ವಿಚಾರಣೆ ನಡೆಸಲು ತನಗೆ ಸಮಯದ ಅಗತ್ಯವಿದೆ ಎಂದು ದಿಲ್ಲಿ ಪೊಲೀಸರು ತಿಳಿಸಿದ ಬಳಿಕ ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶರಾದ ಧರ್ಮೇಂದ್ರ ರಾಣಾ ಸಾಮಾಜಿಕ ಕಾರ್ಯಕರ್ತ ಶಂತನುಗೆ ಬಂಧನದಿಂದ ರಕ್ಷಣೆ ನೀಡಿದ್ದಾರೆ.

ನ್ಯಾಯಾಲಯವು ಈ ವಿಚಾರದ ಕುರಿತು ವಿಚಾರಣೆ ಪುನರಾರಂಭಿಸುವ ತನಕ ಮಾರ್ಚ್ 9ರ ತನಕ  ಮುಲುಕ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ನ್ಯಾಯಾಧೀಶರು ದಿಲ್ಲಿ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ.

ಶಂತನು ಮುಲುಕ್,ದಿಶಾ ರವಿ ಹಾಗೂ ನಿಕಿತಾ ಜೇಕಬ್ ವಿರುದ್ಧ ದಿಲ್ಲಿ ಪೊಲೀಸರು ದೇಶದ್ರೋಹ ಸಹಿತ ಇತರ ಪ್ರಕರಣಗಳನ್ನು ದಾಖಲಿಸಿದ್ದರು. ದಿಶಾ ರವಿಯವರನ್ನು ದಿಲ್ಲಿ ಪೊಲೀಸ್ ನ ಸೈಬರ್ ಸೆಲ್ ತಂಡ ಬೆಂಗಳೂರಿನಲ್ಲಿ ಬಂಧಿಸಿ ದಿಲ್ಲಿಗೆ ಕರೆ ತಂದಿತ್ತು. ಶಂತನು ಹಾಗೂ ಜೇಕಬ್ ಇದೀಗ ನಿರೀಕ್ಷಣಾ ಜಾಮೀನಿನಲ್ಲಿದ್ದಾರೆ. ದಿಶಾ ರವಿ 9 ದಿನಗಳ ಕಸ್ಟಡಿಯ ಬಳಿಕ ಮಂಗಳವಾರ ಜಾಮೀನು ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News