ಜಾತೀಯತೆಯನ್ನು ಪೋಷಿಸುವ ಕುಲಕಸುಬು

Update: 2021-03-04 17:45 GMT

ಮಾನ್ಯರೇ,

 ರಾಜ್ಯ ಸರಕಾರ ಎಲ್ಲಾ ವರ್ಗದ ಜನರನ್ನು ಅರ್ಚಕರನ್ನಾಗಿ ನೇಮಿಸದೆ ಅರ್ಚಕ ವೃತ್ತಿಗೆ ಬ್ರಾಹ್ಮಣ ಸಮುದಾಯದವರನ್ನು ಮಾತ್ರ ನೇಮಿಸಬೇಕೆಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಇತ್ತೀಚೆಗೆ ವಿಪ್ರ ಸಮ್ಮಿಲನ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಕುಲಕಸುಬು ಸರಿ ಅನ್ನುವ ಸಂದೇಶದ ಜೊತೆಗೆ ಜಾತೀಯತೆಯನ್ನು ಪ್ರೋತ್ಸಾಹಿಸುತ್ತದೆ ಅನ್ನಬಹುದು. ಇಂತಹದ್ದೇ ಜಾತಿಯವರು ಇಂತಹದ್ದೇ ಕೆಲಸ ಮಾಡಬೇಕು ಎನ್ನುವ ಕೆಟ್ಟ ಕಾನೂನು ಪದ್ಧತಿ ವ್ಯಾಪಕವಾಗಿ ಹರಡಿದ್ದು ಮನುಸ್ಮತಿಯಿಂದಾಗಿ. ಆದರೆ ಈಗ ನಾವು ಇರುವುದು ವಿಶ್ವವೇ ಮೆಚ್ಚುವಂತಹ ಸುಂದರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ. ದೇಶ ಸಂವಿಧಾನದ ಭದ್ರ ಬುನಾದಿಯ ವ್ಯವಸ್ಥೆಯಲ್ಲಿ ನಡೆಯುತ್ತಾ ಇದೆಯೇ ಹೊರತು ಸಂಸ್ಕೃತಿ, ಸಂಪ್ರದಾಯ, ವರ್ಣಭೇದದಿಂದ ಅಸಮಾನತೆಗೆ ಕಾರಣವಾಗಿದ್ದ ಮನುಸ್ಮತಿಯಿಂದ ಅಲ್ಲ. ಇಲ್ಲಿ ಯಾವುದೇ ಧರ್ಮ, ಜಾತಿಯವರು ಯಾವುದೇ ವೃತ್ತಿಯನ್ನು ಮಾಡಬಹುದು. ನಮ್ಮ ದೇಶದಲ್ಲಿ ಕಾರ್ಯಾಂಗ, ಶಾಸಕಾಂಗ ಹಾಗೂ ನ್ಯಾಯಾಂಗ ವ್ಯವಸ್ಥೆ ಅದ್ಭುತವಾಗಿದ್ದು ಒಬ್ಬ ಸಾಮಾನ್ಯ ವ್ಯಕ್ತಿ ಕೂಡ ಅಸಮಾನ್ಯನ ಸ್ಥಾನವನ್ನು ತಲುಪಬಹುದು. ಚಹಾ ಮಾರುತ್ತಿದ್ದ ವ್ಯಕ್ತಿ ಇಂದು ದೇಶದ ಆಳ್ವಿಕೆ ನಡೆಸುತ್ತಿಲ್ಲವೇ..! ಇತ್ತೀಚಿನ ದಿನಗಳಲ್ಲಿನ ಒಂದು ಉತ್ತಮ ಉದಾಹರಣೆಯೆಂದರೆ ಕಳೆದ ವರ್ಷ ಆಂಧ್ರಪ್ರದೇಶದ ಸಿಎಂ ವೈ.ಎಸ್. ಜಗನ್‌ಮೋಹನ್ ರೆಡ್ಡಿ ಆ ರಾಜ್ಯದಲ್ಲಿ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇವಾಲಯಗಳಲ್ಲಿ ಬ್ರಾಹ್ಮಣರೇತರರನ್ನು ಅರ್ಚಕರಾಗಿ ಘೋಷಣೆ ಮಾಡಿ ಸಮಾನತೆ ಸಾರುವ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿದು ಬದಲಾವಣೆಯ ಕ್ರಾಂತಿ ಮಾಡಿದ್ದರು. ಇದು ಸರ್ವರೂ ಒಪ್ಪುವ ಮೆಚ್ಚುಗೆ ನಡೆ. ಇದೇ ಮಾದರಿಯಲ್ಲಿ ದೇಶದಲ್ಲಿ ಎಲ್ಲಾ ಕಡೆ ಕೂಡ ಬದಲಾವಣೆ ಆಗಬೇಕಿದೆ. ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರ ಬ್ರಾಹ್ಮಣೀಕರಣದ ಪೋಷಣೆಯ ಭೇದಭಾವ ತರುವ ಅವರ ಹೇಳಿಕೆಗಳು ಯಾರೂ ಒಪ್ಪುವಂತಹದ್ದಲ್ಲ..! ಅಂಬೇಡ್ಕರ್ ಹೇಳಿರುವ ಒಂದು ಮಾತು-‘‘ಒಬ್ಬ ವ್ಯಕ್ತಿ ತನ್ನ ಪ್ರತಿಭೆಯಿಂದ ಶ್ರೇಷ್ಠ ಹೊರತು ತನ್ನ ಕುಲಕಸುಬು, ಜಾತಿಯಿಂದಲ್ಲ..’’ ಎಂಬುದನ್ನು ಅರ್ಥೈಸಿಕೊಳ್ಳಬೇಕು. ಅರ್ಥವಾಗದವರು..?

Writer - -ಅನಿಲ್ ಕುಮಾರ್, ನಂಜನಗೂಡು

contributor

Editor - -ಅನಿಲ್ ಕುಮಾರ್, ನಂಜನಗೂಡು

contributor

Similar News