"ಮೋದಿ ʼಸರ್ವಾಧಿಕಾರಿʼ ಎಂಬ ವಿದೇಶಗಳಲ್ಲಿನ ಅಭಿಪ್ರಾಯ ದೂರ ಮಾಡಲು ಬಿಜೆಪಿ ಪ್ರಯತ್ನಿಸಬೇಕು"

Update: 2021-03-08 08:09 GMT

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ 'ಓರ್ವ ಸರ್ವಾಧಿಕಾರಿ' ಎಂದು ವಿದೇಶಗಳಲ್ಲಿ ಹೆಚ್ಚುತ್ತಿರುವ ಒಮ್ಮತದ ಅಭಿಪ್ರಾಯವನ್ನು ದೂರ ಮಾಡಲು ಬಿಜೆಪಿ ನಾಯಕತ್ವ ಶ್ರಮಿಸಬೇಕಿದೆ ಎಂದು ಪಕ್ಷದ ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

"ಬೈಡನ್ ಆಡಳಿತದ ಎರಡನೇ ಅಸ್ತ್ರವೆಂದು ನಾನಂದುಕೊಂಡಂತೆ 'ಭಾರತದ ಪ್ರಜಾಪ್ರಭುತ್ವ ಸಂಸ್ಕøತಿಯನ್ನು ಹೊಗಳಿ, ಮೋದಿಯನ್ನು ಸರ್ವಾಧಿಕಾರಿಯೆಂದು ಟೀಕಿಸಿ' ಎಂಬುದರ ಸುಳಿವನ್ನು ಸಿಎನ್‍ಎನ್‍ನ ಫರೀಖ್ ಝಕಾರಿಯಾ ಅವರು ತಮ್ಮ ಲೇಟೆಸ್ಟ್ ಕಾರ್ಯಕ್ರಮದಲ್ಲಿ ನೀಡಿದ್ದಾರೆ" ಎಂದು ಸ್ವಾಮಿ ಟ್ವೀಟ್ ಮಾಡಿದ್ದಾರೆ.

"ಇದನ್ನು ಅಲ್ಲಗಳೆಯುವುದು ಸುಲಭ ಆದರೆ ವಿದೇಶಗಳಲ್ಲಿ ಇಂತಹ ಒಂದು ಅಭಿಪ್ರಾಯ ಮೂಡುತ್ತಿದೆ ಹಾಗೂ ಇದನ್ನು ಸರಿಪಡಿಸಲು ಬಿಜೆಪಿ ಯತ್ನಿಸಬೇಕು," ಎಂದು ಅವರು ಬರೆದಿದ್ದಾರೆ.

ಸಿಎನ್‍ಎನ್‍ನ ಖ್ಯಾತ ಆ್ಯಂಕರ್ ಝಕಾರಿಯಾ ತಮ್ಮ ಕಾರ್ಯಕ್ರಮದಲ್ಲಿ, ಮೋದಿ ಸರಕಾರವನ್ನು ಟೀಕಿಸಿದ ಒಂದೇ ಕಾರಣಕ್ಕಾಗಿ ಭಾರತದಲ್ಲಿ ಹೋರಾಟಗಾರರು ಹಾಗೂ ಪತ್ರಕರ್ತರ ವಿರುದ್ಧ ದೇಶದ್ರೋಹದ ಪ್ರಕರಣಗಳನ್ನು ದಾಖಲಿಸಲಾಗುತ್ತಿರುವುದು ಹಾಗೂ ಸ್ವೀಡನ್ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್ಬರ್ಗ್ ಟ್ವೀಟ್ ಮಾಡಿದ್ದ ರೈತರ ಪ್ರತಿಭಟನೆ ಕುರಿತ ಟೂಲ್ ಕಿಟ್ ಶೇರ್ ಮಾಡಿದ ಒಂದೇ ಕಾರಣಕ್ಕೆ ದಿಶಾ ರವಿ ಬಂಧನದ ಬಗ್ಗೆ ಉಲ್ಲೇಖಿಸಿದ್ದಾರೆ.

"ಅಮೆರಿಕಾದ  ಪ್ರಜಾಪ್ರಭುತ್ವ ಪರ ಫ್ರೀಡಂ ಹೌಸ್ ಭಾರತದ ಸ್ಥಾನಮಾನವನ್ನು  ಸ್ವತಂತ್ರ ದೇಶದಿಂದ ʼಭಾಗಶಃ ಸ್ವತಂತ್ರʼ ಎಂದು ತನ್ನ ಲೇಟೆಸ್ಟ್ ವರದಿಯಲ್ಲಿ ಹೇಳಿರುವುದನ್ನು ಉಲ್ಲೇಖಿಸಿದ ಝಕಾರಿಯಾ "ಮೋದಿಯ ಆಡಳಿತದಲ್ಲಿ ಭಾರತ ತನ್ನ ಪ್ರಜಾಪ್ರಭುತ್ವ ಸಿದ್ಧಾಂತಗಳಿಂದ ಕೆಳಕ್ಕೆ ಇಳಿದಿದೆ. ಆದರೆ ಇಷ್ಟು ಕೆಳಕ್ಕೆ ಇಷ್ಟೊಂದು ವೇಗವಾಗಿ ಯಾವತ್ತೂ ಇಳಿದಿಲ್ಲ" ಎಂದರಲ್ಲದೆ ಮೋದಿ ಸರಕಾರ ಅಧಿಕಾರಕ್ಕೆ ಬಂದಂದಿನಿಂದ ಇಲ್ಲಿಯ ತನಕ 7,000ಕ್ಕೂ ಅಧಿಕ ದೇಶದ್ರೋಹ ಪ್ರಕರಣಗಳನ್ನು ಹೋರಾಟಗಾರರು, ಪತ್ರಕರ್ತರು ಹಾಗೂ ವಿಪಕ್ಷ ರಾಜಕಾರಣಿಗಳ ವಿರುದ್ಧ ಹೇರಲ್ಪಟ್ಟಿರುವುದನ್ನು ಉಲ್ಲೇಖಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News