ಇದು ಸಾಮಾಜಿಕ ನ್ಯಾಯವೇ?

Update: 2021-03-12 18:00 GMT

ಮಾನ್ಯರೇ.,

2021-2022ರ ಸಾಲಿನ ರಾಜ್ಯ ಬಜೆಟ್‌ನಲ್ಲಿ ಮುಖ್ಯಮಂತ್ರಿಯವರು ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದಿಲ್ಲ. ತುಳಿತಕ್ಕೆ ಒಳಗಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ತಳ ಹಾಗೂ ಹಿಂದುಳಿದ ವರ್ಗಗಳಿಗೆ ಒಟ್ಟಾರೆಯಾಗಿ 500 ಕೋಟಿ ರೂ. ಅನುದಾನ ನೀಡಿ ಈ ಸಮುದಾಯಗಳನ್ನು ಸಂಪೂರ್ಣ ನಿರ್ಲಕ್ಷಿಸಿ ಆರ್ಥಿಕವಾಗಿ ಬಲಾಢ್ಯರಾಗಿರುವ ವೀರಶೈವ ಮತ್ತು ಒಕ್ಕಲಿಗ ಅಭಿವೃದ್ಧಿ ನಿಗಮಗಳಿಗೆ ಮಾತ್ರ ತಲಾ 500 ಕೋಟಿ ಹಣ ನೀಡಿರುವುದು ಎಷ್ಟು ಸರಿ..? ಇದು ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣವೆಂಬಂತೆ ಇದೆ. ಇದು ವೋಟ್ ಬ್ಯಾಂಕ್ ರಾಜಕಾರಣದ ಗಿಮಿಕ್ ಅಲ್ಲವೇ..?

 ಕೊರೋನ ತಂದಿಟ್ಟ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ತೀರಾ ಪ್ರಾಮುಖ್ಯತೆ ಕೊಡುವಂತಹ ವಿಭಾಗಗಳಿಗೆ ಅನುದಾನ ನೀಡುವ ಕುರಿತು ಎಚ್ಚರ ವಹಿಸಬೇಕಿತ್ತು.! ಸದ್ಯ ದ್ವಂದ್ವ ಸ್ಥಿತಿ ನಿರ್ಮಾಣವಾಗಿದೆ. ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ ಸಂವಿಧಾನಾತ್ಮಕವಾಗಿ ಸವಲತ್ತು ಸೌಲಭ್ಯ ಸಿಗಬೇಕಾಗಿರುವವರಿಗೆ ಅವಶ್ಯಕವಾಗಿ ಜವಾಬ್ದಾರಿ ಅರಿತು ವರ್ತಿಸಬೇಕಾದವರು ಗಮನವಹಿಸದೆ ಕಡೆಗಣಿಸಿರುವುದು ನ್ಯಾಯಸಮ್ಮತವಲ್ಲ..! ಜಾತಿ, ಸಮುದಾಯ, ಓಲೈಕೆಗೆ ಹಣ ಕೊಡುವ ಬದಲು ದಲಿತ, ಶೋಷಿತ, ಹಿಂದುಳಿದ ವರ್ಗದ ಬಡ ಸಮುದಾಯಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಾರ್ಯಗಳಿಗೆ ಹಣ ನೀಡಬೇಕಿತ್ತು. ಸಿದ್ದರಾಮಯ್ಯ ಸಿಎಂ ಆಗಿದ್ದ ಸಂದರ್ಭದಲ್ಲಿ ಎಸ್ಸಿ, ಎಸ್ಟಿ ಮತ್ತು ಒಬಿಸಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಈ ವರ್ಗಗಳ ಜನಸಂಖ್ಯೆಗೆ ಅನುಗುಣವಾಗಿ ಪ್ರತಿ ಬಜೆಟ್‌ನಲ್ಲಿ ಹಣ ಮೀಸಲಿಟ್ಟು ಖರ್ಚು ಮಾಡಬೇಕೆಂಬ ಕಾನೂನು ಮಾಡಿತ್ತು. ಆದರೆ, ಬಿಜೆಪಿ ಸರಕಾರ ಪ.ಜಾತಿ, ಪ.ಪಂ, ಒಬಿಸಿಗಳಿಗೆ ನ್ಯಾಯಯುತವಾಗಿ ಸಿಗಬೇಕಾದ ಅನುದಾನವನ್ನು ಪ್ರತಿ ಬಜೆಟ್‌ನಲ್ಲೂ ಹಂತ ಹಂತವಾಗಿ ಕಡಿತಗೊಳಿಸುತ್ತ ಹೆಜ್ಜೆ ಹಾಕುತ್ತಿರುವುದು ಯಾರು ಒಪ್ಪುವಂತಹದ್ದಲ್ಲ. ತುಳಿತಕ್ಕೆ ಒಳಗಾದ ಹಾಗೂ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ಯಾವುದೇ ಸರಕಾರಗಳು ಪಣತೊಟ್ಟು ಕಾರ್ಯನಿರ್ವಹಿಸಬೇಕು. ಏನೇ ಹೊಸ ಕಾನೂನು ತಂದರೂ ಕೂಡ ಕೆಳವರ್ಗದವರನ್ನು ಮೇಲೆತ್ತುವಂತೆ ಇರಬೇಕು ಹೊರತು ಇನ್ನಷ್ಟು ತುಳಿಯುವಂತೆ ಅಲ್ಲ.. ಎಂಬ ಅಂಬೇಡ್ಕರ್‌ರವರ ಮಾತನ್ನು ಈ ಸರಕಾರಗಳು ಪಾಲಿಸುವುದು ದೂರದ ಮಾತು ಎನಿಸುತ್ತಿದೆ.

Writer - -ಅನಿಲ್ ಕುಮಾರ್, ನಂಜನಗೂಡು.

contributor

Editor - -ಅನಿಲ್ ಕುಮಾರ್, ನಂಜನಗೂಡು.

contributor

Similar News