ನಿಯಮ ಮೀರುತ್ತಿರುವ ಖಾಸಗಿ ಶಾಲೆಗಳು

Update: 2021-03-12 18:01 GMT

ಮಾನ್ಯರೇ,

ಕೊರೋನ ಸಾಂಕ್ರಾಮಿಕ ರೋಗದ ಅಟ್ಟಹಾಸದ ಹಿನ್ನೆಲೆಯಲ್ಲಿ ಶೈಕ್ಷಣಿಕ ಸಂಸ್ಥೆಗಳ ಕಾರ್ಯನಿರ್ವಹಣೆ ಹಾಗೂ ಮಕ್ಕಳ ಸುರಕ್ಷತೆಯ ಬಗ್ಗೆ ಸರಕಾರ ಗಂಭೀರತೆ ವಹಿಸಿಕೊಂಡು ಕೆಲ ಸುರಕ್ಷಾ ನಿಯಮಗಳನ್ನು ಜಾರಿ ಮಾಡಿದೆ. ಈ ಹಿನ್ನೆಲೆಯಲ್ಲಿ 6 ರಿಂದ 10ನೇ ತರಗತಿ ನಡೆಸಲು ಮಾತ್ರ ಸರಕಾರ ಅವಕಾಶ ನೀಡಿದೆ. ಈ ನಿಯಮ ಸದ್ಯ ಇದ್ದರೂ ರಾಜ್ಯದ ಕೆಲವೆಡೆ ಕೆಲ ಖಾಸಗಿ ಶಾಲೆಗಳು ಅನುಮತಿ ಇಲ್ಲದೇ 1ರಿಂದ 5ನೇ ತರಗತಿಯ ವಿದ್ಯಾರ್ಥಿಗಳಿಗೆ ನಿಯಮಬಾಹಿರವಾಗಿ ತರಗತಿ ನಡೆಸುತ್ತಿರುವ ಬಗ್ಗೆ ವರದಿಯಾಗಿವೆ. ಇದು ಅಕ್ಷರಶಃ ನಿಯಮ ಉಲ್ಲಂಘನೆ.

ಸರಕಾರದ ಆದೇಶ ಮೀರಿ ರಾಜಾರೋಷವಾಗಿ ಅಥವಾ ಕದ್ದುಮುಚ್ಚಿ ತರಗತಿ ನಡೆಸುವ ಮೂಲಕ ಸರಕಾರದ ಆದೇಶವನ್ನು ಇಂತಹ ಖಾಸಗಿ ಶಾಲೆಗಳು ಮೀರುತ್ತಿವೆ. ಈ ಕುರಿತು ವ್ಯಾಪಕವಾಗಿ ಬಂದ ದೂರುಗಳು ಹಾಗೂ ಮಾಧ್ಯಮಗಳಲ್ಲಿ ಬಂದ ವರದಿಗಳ ಹಿನ್ನೆಲೆಯಲ್ಲಿ ಇಂತಹ ಶಾಲೆಗಳ ವಿರುದ್ಧ ಕೂಡಲೇ ಕಾನೂನು ಕ್ರಮಕೈಗೊಳ್ಳುವಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ರಾಜ್ಯದ ಎಲ್ಲಾ ಜಿಲ್ಲಾ ಉಪನಿರ್ದೇಶಕರುಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿರುವುದು ಸ್ವಾಗತಾರ್ಹ.

ತರಗತಿ ಆರಂಭದ ಹೆಸರಿನಲ್ಲಿ ಶುಲ್ಕ ಸಂಗ್ರಹ ಮಾಡಲು ಇದೊಂದು ನೆಪವಾಗಿದ್ದು ಈ ಮೂಲಕ ಮಕ್ಕಳ ಹಿತಕ್ಕಿಂತ ವ್ಯವಹಾರವೇ ಮುಖ್ಯ ಎಂದು ಸಾಬೀತುಪಡಿಸುವಂತಿದೆ. ತರಗತಿ ತಡವಾಗಿ ಆರಂಭವಾದರೂ ಪರವಾಗಿಲ್ಲ. ಅದಕ್ಕಿಂತ ಮೊದಲು ವಿದ್ಯಾರ್ಥಿಗಳ ಆರೋಗ್ಯದ ಸುರಕ್ಷತೆ ಹೆಚ್ಚು ಮುಖ್ಯ ಎನ್ನುವುದನ್ನು ನಿಯಮ ಮೀರಿ ನಡೆಯುವ ಖಾಸಗಿ ಶಾಲೆಗಳು ಅರಿತುಕೊಳ್ಳಲಿ. ಕೂಡಲೇ ಸರಕಾರದ ನಿಯಮಗಳನ್ನು ಮೀರಿ ಹೋಗುವ ಖಾಸಗಿ ಶೈಕ್ಷಣಿಕ ಸಂಸ್ಥೆಗಳ ವಿರುದ್ಧ ಕಠಿಣವಾದ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಇದರಲ್ಲಿ ಯಾವುದೇ ರಾಜಕೀಯ ಆಗದಂತೆ ಸಚಿವಾಲಯ ನೋಡಿಕೊಳ್ಳಬೇಕಾಗಿದೆ. 

Writer - - ಶಂಶೀರ್ ಬುಡೋಳಿ, ಬಂಟ್ವಾಳ

contributor

Editor - - ಶಂಶೀರ್ ಬುಡೋಳಿ, ಬಂಟ್ವಾಳ

contributor

Similar News