"ನಾನು ಬಿಜೆಪಿ ಕಾರ್ಯಕರ್ತನೇ ಅಲ್ಲ": ಪಕ್ಷದ ಅಭ್ಯರ್ಥಿ ಪಟ್ಟಿಯಲ್ಲಿ ತನ್ನ ಹೆಸರಿರುವುದು ಕಂಡು ಅವಾಕ್ಕಾದ ಕೇರಳದ ಯುವಕ!
ಸುಲ್ತಾನ್ ಬತ್ತೇರಿ: ಕೇರಳದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷವು ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಈ ನಡುವೆ ವಯನಾಡ್ ನ ಮಾನಂದವಾಡಿ ಕ್ಷೇತ್ರದಲ್ಲಿ ಯುವಕನೋರ್ವನ ಹೆಸರನ್ನು ಬಿಜೆಪಿಯು ಪ್ರಕಟಿಸಿದ್ದು, ಆತ ತಾನು ಬಿಜೆಪಿಯ ಕಾರ್ಯಕರ್ತನಲ್ಲ ಮತ್ತು ನನಗೆ ರಾಜಕೀಯದಲ್ಲಿ ಆಸಕ್ತಿಯಿಲ್ಲ ಎಂದು ಚುನಾವಣೆಗೆ ಸ್ಫರ್ಧಿಸುವ ನಿರ್ಧಾರ ಹಿಂಪಡೆದಿದ್ದಾನೆ ಎಂದು ತಿಳಿದು ಬಂದಿದೆ.
ಮಣಿಕಂಡನ್ ಯಾನೆ ಮಣಿಕುಟ್ಟನ್ ಎಂಬಾತ ಆದಿವಾಸಿ ಪಾನಿಯ ಸಮುದಾಯಕ್ಕೆ ಸೇರಿದವರಾಗಿದ್ದು, ತಮ್ಮ ಸಮುದಾಯದಲ್ಲೇ ಎಂಬಿಎ ಪದವಿ ಪಡೆದಿರುವ ಏಕೈಕ ವ್ಯಕ್ತಿಯಾಗಿದ್ದಾರೆ. ವಯನಾಡ್ ನ ಮಾನಂದವಾಡಿ ಕ್ಷೇತ್ರದಲ್ಲಿ ಆದಿವಾಸಿಗಳಿಗೆ ಮೀಸಲಿಟ್ಟ ಸ್ಥಾನದಲ್ಲಿ ಬಿಜೆಪಿಯು ಮಣಿಕುಟ್ಟನ್ ಹೆಸರನ್ನು ಅಂತಿಮಗೊಳಿಸಿದೆ. ಮೊದಲು, ಇದು ಬೇರೆ ಯಾವುದೋ ವ್ಯಕ್ತಿಯಿರಬೇಕು ಎಂದು ಊಹಿಸಿದ್ದ ಮಣಿಕುಟ್ಟನ್ ಬಳಿಕ ಅದು ತನ್ನ ಹೆಸರೇ ಎಂದು ಖಾತ್ರಿಯಾದಾಗ ಚುನಾವಣೆಗೆ ಸ್ಫರ್ಧಿಸುವ ನಿರ್ಧಾರವನ್ನು ಹಿಂಪಡೆದುಕೊಂಡಿದ್ದಾರೆ.
"ನಾನು ಬಿಜೆಪಿಯ ಕಾರ್ಯಕರ್ತನಲ್ಲ. ಟಿವಿಯಲ್ಲಿ ನನ್ನ ಹೆಸರು ಕಂಡಾಗ ನಾನು ಅವಾಕ್ಕಾದೆ. ಪಾನಿಯ ಸಮುದಾಯದಿಂದ ಅಭ್ಯರ್ಥಿಯನ್ನು ಆರಿಸಿದ್ದು ಸಂತೋಷವಾಗಿದೆ. ಆದರೆ, ನಾನು ಬಿಜೆಪಿ ಪಕ್ಷದಲ್ಲಿ ಸ್ಫರ್ಧಿಸುವುದಿಲ್ಲ ಎಂದು ಫೋನ್ ಮೂಲಕವೇ ನಾಯಕರೊಂದಿಗೆ ಹೇಳಿದ್ದೇನೆ. ನನಗೆ ಕುಟುಂಬ, ಕೆಲಸ ಎಂದು ಬದುಕಿದರೆ ಸಾಕು" ಎಂದು ಮಣಿಕುಟ್ಟನ್ ಹೇಳಿಕೆ ನೀಡಿದ್ದಾರೆ.
ಇನ್ನು ಈ ಕುರಿತು ಫೇಸ್ ಬುಕ್ ನಲ್ಲಿ ಅಂಬೇಡ್ಕರ್ ಫೋಟೊದೊಂದಿಗೆ "ನನ್ನನ್ನು ತಲೆಕೆಳಗಾಗಿಸಿ ತೂಗಿ ಕೊಂದರೂ ಸರಿ, ನಾನು ನನ್ನ ಜನರನ್ನು ವಂಚಿಸುವುದಿಲ್ಲ" ಎಂಬ ಅಂಬೇಡ್ಕರ್ ರ ಹೇಳಿಕೆಯನ್ನೂ ಪ್ರಕಟಿಸಿದ್ದಾರೆ.
ಮಣಿಕುಟ್ಟನ್ ಸ್ಫರ್ಧೆಯಿಂದ ಹಿಂದೆ ಸರಿಯುವುದರೊಂದಿಗೆ ಸದ್ಯ ವಯನಾಡ್ ಕ್ಷೇತ್ರದಲ್ಲಿ ಮೂರು ಕಡೆಗಳಲ್ಲಿ ಬಿಜೆಪಿಗೆ ಯಾವುದೇ ಅಭ್ಯರ್ಥಿಗಳಿಲ್ಲ ಎಂದು ಕೇರಳದ ಮಾಧ್ಯಮವೊಂದು ವರದಿಯಲ್ಲಿ ಉಲ್ಲೇಖಿಸಿದೆ.
Posted by Manikuttan Paniyan on Sunday, 14 March 2021
എന്നെ കേൾക്കണം... കേന്ദ്രനേതൃത്വം മാനന്തവാടി നിയോജകമണ്ഡലം ബി ജെ പി എം എൽ എ സ്ഥാനാർത്ഥിയായി എന്നെ പരിഗണിച്ചിരുന്നു... സ്നേഹപൂർവ്വം ഈ ഒരു അവസരം നിരസിക്കുന്നു... സ്നേഹപൂര്വ്വം മണിക്കുട്ടൻ
Posted by Manikuttan Paniyan on Sunday, 14 March 2021