"ಉತ್ತರ ಪ್ರದೇಶದ ಈ ಮಂದಿರ ಮೊದಲು ಎಲ್ಲರಿಗೂ ಮುಕ್ತವಾಗಿತ್ತು, ಈಗ ಅಲ್ಲಿನ ನೀರು ಕುಡಿಯುವುದೂ ಅಪರಾಧವಾಗಿದೆ"

Update: 2021-03-15 16:34 GMT
photo: theprint.in

ದಸ್ನಾ(ಘಾಝಿಯಾಬಾದ್),ಮಾ.15: ಉತ್ತರ ಪ್ರದೇಶದ ದಸ್ನಾದ ಈ ಮಂದಿರದಲ್ಲಿ ಮೊದಲು ಎಲ್ಲರಿಗೂ ಪ್ರವೇಶ ಮುಕ್ತವಾಗಿತ್ತು,ಈಗ ಅನ್ಯಮತೀಯರ ಪ್ರವೇಶವನ್ನು ನಿಷೇಧಿಸಲಾಗಿದೆ. ಮಂದಿರದ ಮಹಂತ ಯತಿ ನರಸಿಂಹಾನಂದ ಸರಸ್ವತಿಯ ಆದೇಶದ ಮೇರೆಗೆ ‘ಈ ಮಂದಿರವು ಹಿಂದುಗಳ ಪವಿತ್ರ ಸ್ಥಳವಾಗಿದೆ. ಇಲ್ಲಿ ಮುಸಲ್ಮಾರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ ’ಎಂಬ ಫಲಕವನ್ನು ಮಂದಿರದ ಹೊರಗೆ ಹಾಕಲಾಗಿದೆ. ಗುರುವಾರ ಮಂದಿರದ ಉದ್ಯೋಗಿಯೋರ್ವ 14ರ ಹರೆಯದ ಮುಸ್ಲಿಮ್ ಬಾಲಕನಿಗೆ ಮಾರಣಾಂತಿಕವಾಗಿ ಥಳಿಸಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಮಂದಿರದ ನಿಷೇಧಿತ ಪ್ರದೇಶವನ್ನು ಪ್ರವೇಶಿಸಿ ನೀರು ಕುಡಿದಿದ್ದು ಅವಿದ್ಯಾವಂತನಾಗಿರುವ ಈ ಬಾಲಕ ಮಾಡಿದ್ದ ತಪ್ಪಾಗಿತ್ತು.

 ಯತಿಯ ಚೇಲಾ ಆಗಿರುವ ಮಂದಿರದ ಸೇವಕ್ ಶೃಂಗಿ ನಂದನ ಯಾದವ ಬಾಲಕ ಮುಸ್ಲಿಮ್ ಎನ್ನುವುದು ಗೊತ್ತಾದಾಗ ಆತನನ್ನು ಹಿಗ್ಗಾಮುಗ್ಗಾ ಥಳಿಸಿ ಮರ್ಮಾಂಗಕ್ಕೆ ಒದ್ದಿದ್ದ,ತೋಳುಗಳನ್ನು ತಿರುಚಿ ಅವುಗಳನ್ನು ನೆಲಕ್ಕೆ ಅಪ್ಪಳಿಸಿದ್ದ. ಯಾದವ ಬಾಲಕನನ್ನು ಥಳಿಸುತ್ತಿದ್ದರೆ ಸಹಚರ ಶಿವಾನಂದ ಈ ದೃಶ್ಯವನ್ನು ವೀಡಿಯೊ ಚಿತ್ರೀಕರಿಸಿದ್ದ.

ವೀಡಿಯೊ ವೈರಲ್ ಆದ ಬಳಿಕ ಘಾಝಿಯಾಬಾದ್ ಪೊಲೀಸರು ಯಾದವ ಮತ್ತು ಶಿವಾನಂದನನ್ನು ಬಂಧಿಸಿ,ಐಪಿಸಿಯ ವಿವಿಧ ಕಲಮ್ಗಳಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ನ್ಯಾಯಾಲಯವು ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿದೆ.

ಬಿಹಾರದ ಭಾಗಲ್ಪುರ ನಿವಾಸಿಯಾದ ಯಾದವ ಆರು ತಿಂಗಳ ಹಿಂದೆ ಇಲ್ಲಿಗೆ ಬಂದು ಯತಿಯ ಶಿಷ್ಯನಾಗಿ ಸೇರಿಕೊಂಡಿದ್ದ. ಶಿವಾನಂದ ಮೂಲತಃ ದಿಲ್ಲಿಯ ನಿವಾಸಿಯಾಗಿದ್ದಾನೆ.

ʼಮುಸ್ಲಿಮರಿಗೆ ದೇವಾಲಯಕ್ಕೆ ಪ್ರವೇಶವಿಲ್ಲ‌ʼ ಎಂಬ ಬೋರ್ಡ್

ಬಾಲಕನ ತಂದೆ ಕಟ್ಟಡ ಕಾರ್ಮಿಕನಾಗಿದ್ದಾನೆ. ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಆತ,‘ಮಂದಿರದ ಮಹಂತ ನರಸಿಂಹಾನಂದ ಮತ್ತು ಆತನ ಶಿಷ್ಯರು ನಮ್ಮನ್ನು ಅಸ್ಪಶ್ಯರಂತೆ ನೋಡುತ್ತಿದ್ದಾರೆ. ಅಲ್ಲಿ ನೀರು ಕುಡಿಯುವುದೂ ಅಪರಾಧವಾಗಿದೆ. ಅವರಿಂದ ಥಳಿಸಲ್ಪಟ್ಟವರಲ್ಲಿ ನನ್ನ ಮಗ ಮೊದಲಿಗನೇನಲ್ಲ ’ಎಂದು ಹೇಳಿದ.

ಘಟನೆಯಿಂದ ತೀವ್ರವಾಗಿ ನೊಂದಿರುವ ಬಾಲಕ,ತಾನು ಇನ್ನೆಂದೂ ಆ ಪ್ರವೇಶಕ್ಕೆ ಹೋಗುವುದಿಲ್ಲ ಎಂದು ತಿಳಿಸಿದ.

ಹಿಂದು ಏಕತಾ ಸಂಘದ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವೀಡಿಯೊವನ್ನು ಪೋಸ್ಟ್ ಮಾಡಲಾಗಿತ್ತು(ಈಗ ತೆಗೆಯಲಾಗಿದೆ). ಬಾಲಕನನ್ನು ಥಳಿಸುತ್ತಿರುವುದನ್ನು ವೈಭವೀಕರಿಸಲಾಗಿದ್ದು,‘ಮುಸ್ಲಿಮ್ನನ್ನು ನಪುಂಸಕನನ್ನಾಗಿಸಲಾಗಿದೆ’ ಎಂದು ಚಾನೆಲ್ ಘೋಷಿಸಿತ್ತು. ಇನ್ನೊಂದು ವೀಡಿಯೊ ಯಾದವ ಮುಸ್ಲಿಂ ವ್ಯಕ್ತಿಯೋರ್ವನನ್ನು ಥಳಿಸುತ್ತಿರುವುದನ್ನು ತೋರಿಸಿದ್ದು,‘ಮುಸ್ಲಿಮರಿಗೆ ಥಳಿತ ’ಎಂಬ ಅಡಿಬರಹ ನೀಡಲಾಗಿದೆ.

ಈ ಘಟನೆ ಸುದ್ದಿ ಮಾಡಿದೆಯಾದರೂ ಈ ರೀತಿ ಜನರನ್ನು ಥಳಿಸುವ ಘಟನೆ ಇದೇ ಮೊದಲೇನಲ್ಲ. ಕಳೆದ ಐದಾರು ವರ್ಷಗಳಿಂದ ಪರಿಸ್ಥಿತಿ ತೀರ ಹದಗೆಟ್ಟಿದೆ ಎಂದು ಸ್ಥಳೀಯ ನಿವಾಸಿ ಶಾ ಆಲಂ ತಿಳಿಸಿದರು.
 
2019ರಲ್ಲಿ ಬಲಪಂಥೀಯ ರಾಜಕಾರಣಿ ಕಮಲೇಶ ತಿವಾರಿಯ ಹತ್ಯೆಯ ಬಳಿಕ ಮತ್ತು 2020,ಫೆ.22ರ ದಿಲ್ಲಿ ದಂಗೆಗಳಿಗೆ ಮುನ್ನಾದಿನ ನರಸಿಂಹಾನಂದ ಮುಸ್ಲಿಮರ ವಿರುದ್ಧ ದಾಳಿಯ ಬೆದರಿಕೆಯೊಡ್ಡಿದ್ದ. ಆತನ ಶಿಷ್ಯರು ಆತನನ್ನು ‘ಧರ್ಮ ಯೋಧ’ಎಂದು ಪರಿಗಣಿಸಿದ್ದಾರೆ. ಆಗಾಗ್ಗೆ ಮುಸ್ಲಿಮರ ವಿರುದ್ಧ ಪ್ರಚೋದನಾತ್ಮಕ ಭಾಷಣಗಳನ್ನು ಮಾಡುವ ನರಸಿಂಹಾನಂದ,ತನ್ನ ಪ್ರತಿ ದ್ವೇಷಭಾಷಣದಲ್ಲಿಯೂ ಮುಸ್ಲಿಮರ ಜನಸಂಖ್ಯೆಯನ್ನು ನಿಯಂತ್ರಿಸುವ ಅಗತ್ಯವನ್ನು ಪ್ರತಿಪಾದಿಸುತ್ತಾನೆ.

ಯಾದವನ ಫೇಸ್ಬುಕ್ ಪೇಜ್ ಮುಸ್ಲಿಮರ ವಿರುದ್ಧದ ಪೋಸ್ಟ್ಗಳಿಂದ ತುಂಬಿಹೋಗಿದೆ. ಮಂದಿರದಲ್ಲಿ ಹಿಂದು ಯುವಕರಿಗೆ ಶಸ್ತ್ರಾಸ್ತ್ರ ತರಬೇತಿಯನ್ನು ನೀಡಲಾಗುತ್ತಿದೆ ಎಂದೂ ಸ್ಥಳೀಯರು ಆರೋಪಿಸಿದ್ದಾರಾದರೂ,ಈ ಬಗ್ಗೆ ತಮಗೆ ಯಾವುದೇ ಮಾಹಿತಿಯಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಕೃಪೆ: theprint.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News