ವಿಧಾನಸಭಾ ಚುನಾವಣೆ: ಪಶ್ಚಿಮಬಂಗಾಳ, ಅಸ್ಸಾಂನಲ್ಲಿ ಮೊದಲ ಹಂತದ ಪ್ರಚಾರಕ್ಕೆ ತೆರೆ

Update: 2021-03-25 15:39 GMT
 ಟಿಎಂಸಿ ಅಭ್ಯರ್ಥಿ ರಾಣಾ ಚಟರ್ಜಿ ಗುರುವಾರ ಮನೆ-ಮನೆ ಪ್ರಚಾರದಲ್ಲಿ ತೊಡಗಿದ್ದ ಸಂದರ್ಭ.

ಹೊಸದಿಲ್ಲಿ: ಪಶ್ಚಿಮಬಂಗಾಳ ಹಾಗೂ ಅಸ್ಸಾಂ ವಿಧಾನಸಭಾ ಚುನಾವಣೆಯ ಮೊದಲ ಹಂತದ ಪ್ರಚಾರ ಕಾರ್ಯಕ್ಕೆ ಗುರುವಾರ ತೆರೆ ಬಿದ್ದಿದೆ.

ಕುತೂಹಲ ಕೆರಳಿಸಿರುವ ಪಶ್ಚಿಮಬಂಗಾಳ ಹಾಗೂ ಅಸ್ಸಾಂನಲ್ಲಿ ಮೊದಲ ಹಂತದ ಮತದಾನ ಮಾರ್ಚ್ 27 ರಂದು ನಡೆಯಲಿದೆ. ಒಟ್ಟು 8 ಹಂತಗಳಲ್ಲಿ ನಡೆಯುವ ಪಶ್ಚಿಮಬಂಗಾಳ ರಾಜ್ಯ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್( ಟಿಎಂಸಿ), ಭಾರತೀಯ ಜನತಾಪಕ್ಷ(ಬಿಜೆಪಿ) ಹಾಗೂ ಕಾಂಗ್ರೆಸ್-ಎಡ ಪಕ್ಷಗಳ ಮೈತ್ರಿಕೂಟಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

3 ಹಂತಗಳಲ್ಲಿ ನಡೆಯುವ ಅಸ್ಸಾಂ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ, ಅಸ್ಸಾಂ ಗಣ ಪರಿಷದ್ (ಎಜಿಪಿ) ಹಾಗೂ ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ ಮೈತ್ರಿ ಮಾಡಿಕೊಂಡಿದ್ದು, ಸತತ 2ನೇ ಬಾರಿ ಅಧಿಕಾರಕ್ಕೆ ಏರುವ ನಿರೀಕ್ಷೆಯಲ್ಲಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ ಹಾಗೂ ಸಾಮಾಜಿಕ ಹೋರಾಟಗಾರ ಅಖಿಲ್ ಗೊಗೊಯ್ ನೇತೃತ್ವದ ಯುಆರ್ ಎಫ್ ಪಕ್ಷ ಕಣದಲ್ಲಿವೆ.

ಮೊದಲ ಹಂತದಲ್ಲಿ ಪ.ಬಂಗಾಳದ 30 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ. ಇದರಲ್ಲಿ ಪುರುಲಿಯಾ ಹಾಗೂ ಜಾಗ್ರಾಮ್ ಜಿಲ್ಲೆಯ ಎಲ್ಲ ಕ್ಷೇತ್ರಗಳು, ಬಂಕುರಾ, ಪೂರ್ವ ಮಿಡ್ನಾಪುರ ಹಾಗೂ ಪಶ್ಚಿಮ ಮಿಡ್ನಾಪುರದ ಕೆಲವು ಕ್ಷೇತ್ರಗಳು ಒಳಗೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News