ಹೀಗೊಂದು ದಗಾಕೋರರ ಜಾಲ

Update: 2021-03-26 18:00 GMT

ಮಾನ್ಯರೇ,

ನಿಮ್ಮ ಕೈಯಲ್ಲಿರುವ ಮೊಬೈಲ್ ರಿಂಗಣಿಸುತ್ತದೆ. ಮೊಬೈಲೆತ್ತಿ ನೀವು ನೋಡಿದಾಗ ಅಲ್ಲಿ ನಿಮಗೆ ಬರುತ್ತಿರುವ ವೀಡಿಯೊ ಕರೆಯೊಂದನ್ನು ನೀವು ಕಾಣುವಿರಿ.
ಅಪರಿಚಿತ ಕರೆ ಸ್ವೀಕರಿಸಬೇಕೋ ಬೇಡವೋ ಎಂದು ಯೋಚಿಸುವ ಮುನ್ನವೇ ನಿಮ್ಮ ಬೆರಳ ತುದಿ ನಿಮಗರಿವಿಲ್ಲದಂತೆ ಕರೆ ಸ್ವೀಕರಿಸಿಯಾಗಿದೆ ಎಂದು ತಿಳಿಯಿರಿ. ಅತ್ತ ಕಡೆಯಿಂದ ನಿಮಗೆ ಕರೆ ಮಾಡಿದವರು ಯಾರು ಎಂದು ನೋಡಲು ನೀವು ಬಯಸಿದರೂ... ಯಾರೂ ಕಾಣ ಸಿಗುವುದಿಲ್ಲ. ಕೆಲವೇ ಸೆಕೆಂಡ್‌ಗಳ ನಂತರ ಕರೆ ಕೊನೆಗೊಳ್ಳುತ್ತದೆ.

ಇದಾಗಿ ಕೆಲವೇ ನಿಮಿಷದಲ್ಲಿ ನಿಮ್ಮ ಮೊಬೈಲ್‌ಗೆ ಒಂದು ಫೋಟೊ ಬರುತ್ತದೆ. ಅದರಲ್ಲಿ ಒಂದು ಗಂಡು ಹೆಣ್ಣು ನಗ್ನವಾಗಿ ಬಾತ್ ರೂಮಿನಲ್ಲೋ, ಇನ್ನೆಲ್ಲೋ ಜತೆಗಿರುವ ಅಶ್ಲೀಲ ಚಿತ್ರವು ನಿಮಗೆ ಕಾಣ ಸಿಗುತ್ತದೆ. ಅಷ್ಟೇ ಅಲ್ಲ ವಿಕೃತಿ ಮೆರೆದ ಈ ದಗಾಕೋರರು ಕಳುಹಿಸಿದ ಚಿತ್ರವನ್ನು ಗಮನಿಸಿದಾಗ ನೀವು ಅದರಲ್ಲಿನ ಪುರುಷ ಚಿತ್ರದಲ್ಲಿ ಕಾಣ ಸಿಗುವ ಫೋಟೊದಲ್ಲಿರುವ ಮುಖ ನಿಮ್ಮದೇ ಮುಖವಾಗಿರುತ್ತದೆ. ನಿಮಗೀಗ ನಾಚಿಕೆ ಅವಮಾನದೊಂದಿಗೆ ಆಘಾತವೂ ಉಂಟಾಗುತ್ತದೆ.
ಊಹಿಸಲೂ ಅಸಾಧ್ಯವಾಗುವ ರೀತಿಯಲ್ಲಿ ಇವೆಲ್ಲವೂ ಕ್ಷಣಗಳೊಳಗೆ ನಡೆದು ಹೋಗಿರುತ್ತದೆ.

 ಇದರ ಜತೆಗೆ ನಿಮಗೆ ಹಿಂದಿಯಲ್ಲಿ ಮೆಸೇಜ್ ಬರಲು ತೊಡಗುತ್ತದೆ, ಇಂತಿಷ್ಟು ಹಣದ ಡಿಮಾಂಡ್‌ನೊಂದಿಗೆ ‘‘ನಿಮ್ಮ ಈ ಪೋಟೊವನ್ನು ಅಲ್ಲಿ, ಇಲ್ಲಿ ಇಂಟರ್ನೆಟ್‌ನಲ್ಲಿ ಹರಿಯ ಬಿಡಲಾಗುವುದು’’ ಹೀಗೆಂದು ಆ ಮೆಸೇಜ್‌ನಲ್ಲಿ ನಿಮ್ಮನ್ನು ಬ್ಲಾಕ್‌ಮೇಲ್ ಮಾಡಲಾಗುತ್ತದೆ.
ಇದು ಎಲ್ಲೋ ಓದಿದ, ಕೇಳಿದ ವಿಷಯವಲ್ಲ. ನಮ್ಮ ಪರಿಚಿತರೊಂದಿಗೇ, ನಮ್ಮ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಘಟನೆಯಾಗಿದೆ.

ಇನ್ನು ಕೆಲವು ಈ ರೀತಿಯ ವೀಡಿಯೋ ಕರೆ ಸ್ವೀಕರಿಸಿದವರು ಮಾಸ್ಕ್ ಧರಿಸಿದ್ದಲ್ಲಿ ಮಾಸ್ಕ್ ತೆಗೆಯಿರೆಂದೂ, ಅಕಸ್ಮಾತ್ ನೀವು ಕ್ಯಾಮರಾಗೆ ಕೈ ಅಡ್ಡ ಹಿಡಿದು ಕರೆ ಸ್ವೀಕರಿಸಿದರೆ ಕರೆಯ ಸಂಪರ್ಕ ಕಡಿದು ಮುಖ ತೋರಿಸಿರೆಂದೂ ಮೆಸೇಜ್‌ಗಳು ಬರುತ್ತವೆ.

ಇದಕ್ಕಾಗಿ ಮೊಬೈಲ್ ಹೊಂದಿರುವ ಎಲ್ಲರೂ ಬಹಳ ಜಾಗರೂಕರಾಗಿರ ಬೇಕಾಗಿದೆ. ಅಪ್ಪಿತಪ್ಪಿಯೂ ಅಪರಿಚಿತ ಮೊಬೈಲ್ ಕರೆಯನ್ನು ಸ್ವೀಕರಿಸಲು ಹೋಗಲೇ ಬೇಡಿ. ಅದರಲ್ಲೂ ವೀಡಿಯೊ ಕರೆಯನ್ನಂತೂ ಸ್ವೀಕರಿಸಲೇ ಬೇಡಿ.

ಅಕಸ್ಮಾತ್ ನಿಮಗೆ ಇಂತಹ ಕರೆ ಬಂದಿದ್ದು, ನಿಮ್ಮ ಅರಿವಿಗೆ ಬರುವ ಮೊದಲೇ ನೀವು ಕರೆ ಸ್ವೀಕರಿಸಿದ್ದು, ತದನಂತರ ನಿಮಗೆ ಈ ರೀತಿಯ ಬ್ಲ್ಲಾಕ್‌ಮೇಲ್ ಮೆಸೇಜ್‌ಗಳು ಬಂದಲ್ಲಿ ಖಂಡಿತಾ ನೀವು ಮಾನಸಿಕವಾಗಿ ಕುಗ್ಗದೆ ಧೈರ್ಯವಾಗಿದ್ದು ಇದನ್ನು ತಕ್ಷಣ ಕ್ರೈಂ ಬ್ರಾಂಚ್‌ನವರಿಗೆ ವಿವರ ಸಮೇತ ತಿಳಿಸಿ ಹಾಗೂ ನಿಮ್ಮ ಮನೆಯವರಿಗೂ ಈ ವಿಷಯವನ್ನು ತಿಳಿಸಿ ಬಿಡಿ. ಅಕಸ್ಮಾತ್ ನಾಳೆ ಫೋಟೊ, ವೀಡಿಯೊ ನಿಮ್ಮವರಿಗೆ ಬಂದಲ್ಲಿ ಯಾರೂ ನಿಮ್ಮನ್ನು ಅನುಮಾನಿಸದಂತಿರಲು ಅಥವಾ ನೀವೂ ಅಪಮಾನಿತರಾಗದಿರಲು ಇದು ಸಹಕಾರಿಯಾಗಬಹುದು.

ಮೊದಲೇ ನಿಮ್ಮವರಿಗೆ ಈ ವಿಷಯದ ಬಗ್ಗೆ ಸ್ಪಷ್ಟ ಅರಿವಿರಲಿ. ಆದಷ್ಟು ನಿಮ್ಮ ಆತ್ಮೀಯರಿಗೂ ಇಂತಹ ಕರೆಯ ಬಗ್ಗೆ ಎಚ್ಚರ ವಹಿಸಲು ತಿಳಿಸಿ ಬಿಡಿ.
ಬೇಗನೆ ಇಂತಹ ವಂಚನಾ ಜಾಲಗಳನ್ನು ಹುಡುಕಿ ಹಿಡಿದು ಮಟ್ಟ ಹಾಕಲು ಕ್ರೈಂ ಬ್ರಾಂಚ್ ನವರಿಗೆ ನಾವೂ ಸಂಪೂರ್ಣ ಸಹಕರಿಸೋಣ.
 ಇಂದು ಎಲ್ಲೆಡೆಯೂ ತುಂಬಿರುವ ಇಂತಹ ಮೈಗಳ್ಳ ದಗಾಕೋರರ ಅನ್ಯಾಯ ಮೋಸ ವಂಚನೆಗಳ ಜಾಲ ಅಳಿದು ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಹಾಗೂ ನಮ್ಮೆಲ್ಲರ ಸೌಹಾರ್ದದ ಉತ್ತಮ ಬಾಳ್ವೆಗಾಗಿಯೂ ನಾವೆಲ್ಲರೂ ಒಟ್ಟಾಗಿ ನಿಂತು ಶ್ರಮಿಸಬೇಕಾಗಿದೆ.

Writer - -ಎಚ್. ಬಿ., ಬೆಂಗಳೂರು

contributor

Editor - -ಎಚ್. ಬಿ., ಬೆಂಗಳೂರು

contributor

Similar News