×
Ad

ನಮ್ಮ ಕ್ಷೇತ್ರಗಳಿಗೆ ಬಂದು ಪ್ರಚಾರ ನಡೆಸಿ ಎಂದು ಮೋದಿಯನ್ನು ಆಹ್ವಾನಿಸುತ್ತಿರುವ ಎದುರಾಳಿ ಡಿಎಂಕೆ ಅಭ್ಯರ್ಥಿಗಳು!

Update: 2021-04-02 16:26 IST

ಚೆನ್ನೈ: ತಮಿಳುನಾಡಿನ ವಿವಿಧ ಕ್ಷೇತ್ರಗಳಲ್ಲಿ ಕಣಕ್ಕಿಳಿದಿರುವ ಡಿಎಂಕೆ ಅಭ್ಯರ್ಥಿಗಳು ಪ್ರಧಾನಿ ನರೇಂದ್ರ ಮೋದಿಗೆ ತಮ್ಮ ಕ್ಷೇತ್ರಗಳಿಗೆ ಆಗಮಿಸಿ ʼಪ್ರಚಾರʼ ನಡೆಸಲು ʼಸ್ವಾಗತಿಸುತ್ತಿದ್ದಾರೆʼ ಹಾಗೂ ಈ ಕುರಿತು ಟ್ವೀಟ್ ಮಾಡುತ್ತಿದ್ದಾರೆ. ಅದಕ್ಕೆ ಅವರು ನೀಡುತ್ತಿರುವ ಕಾರಣವೂ  ಕುತೂಹಲಕಾರಿ, ಮೋದಿ ಬಂದು  ಪ್ರಚಾರ ನಡೆಸಿದರೆ ತಮ್ಮ ಗೆಲುವಿನ ಅಂತರ ಹೆಚ್ಚಾಗುತ್ತಿದೆ ಎಂದು ಇವರೆಲ್ಲ ವ್ಯಂಗ್ಯಾತ್ಮಕವಾಗಿ ಹೇಳುತ್ತಿದ್ದಾರೆ. ಮೋದಿ ಸದ್ಯ ಎಐಎಡಿಎಂಕೆ-ಎನ್‍ಡಿಎ ಮೈತ್ರಿಕೂಟದ ಪರ ತಮಿಳುನಾಡಿನಲ್ಲಿ ಪ್ರಚಾರ ನಿರತರಾಗಿರುವುದನ್ನು ಇಲ್ಲಿ ಸ್ಮರಿಸಬಹುದು.

ಅವರನ್ನು ಪ್ರಚಾರಕ್ಕೆ ಆಹ್ವಾನಿಸಿ ಟ್ವೀಟ್ ಮಾಡಿದ ಡಿಎಂಕೆ ಅಭ್ಯರ್ಥಿಗಳೆಲ್ಲರ ಟ್ವೀಟ್‍ಗಳು ಬಹುತೇಕ ಒಂದೇ ರೀತಿಯಾಗಿರುವುದನ್ನೂ ಇಲ್ಲಿ ಉಲ್ಲೇಖಿಸಬಹುದು.

"ಆತ್ಮೀಯ ಪ್ರಧಾನಿ ನರೇಂದ್ರ ಮೋದಿ, ದಯವಿಟ್ಟು ತಿರುಚೆಂಡೂರಿನಲ್ಲಿ ಪ್ರಚಾರ ನಡೆಸಿ. ನಾನು ಇಲ್ಲಿನ ಡಿಎಂಕೆ ಅಭ್ಯರ್ಥಿ, ನಿಮ್ಮ ಪ್ರಚಾರದಿಂದ ನನ್ನ ಗೆಲುವಿನ ಅಂತರ ಹೆಚ್ಚಾಗಲು ಸಹಾಯವಾಗುತ್ತದೆ. ಧನ್ಯವಾದ ಸರ್" ಎಂದು ತಿರುಚೆಂಡೂರ್ ಕ್ಷೇತ್ರದ ಡಿಎಂಕೆ ಅಭ್ಯರ್ಥಿ ಅನಿತಾ ರಾಧಾಕೃಷ್ಣನ್ ಟ್ವೀಟ್ ಮಾಡಿದ್ದಾರೆ.

ರಾಣಿಪೇಟ್ ಕ್ಷೇತ್ರದ ಹಾಲಿ ಶಾಸಕ ಹಾಗೂ ಡಿಎಂಕೆ ಅಭ್ಯರ್ಥಿ ಆರ್ ಗಾಂಧಿ ಟ್ವೀಟ್ ಮಾಡಿ "ಆತ್ಮೀಯ ಪ್ರಧಾನಿಗಳೇ, ದಯವಿಟ್ಟು ರಾಣಿಪೇಟ್‍ನಲ್ಲಿ ಪ್ರಚಾರ ನಡೆಸಿ. ನಾನು ಇಲ್ಲಿನ ಡಿಎಂಕೆ ಅಭ್ಯರ್ಥಿ  ಹಾಗೂ ಅದು ನನ್ನ ಗೆಲುವಿನ ಅಂತರ ಹೆಚ್ಚಿಸಲು ಸಹಾಯ ಮಾಡುತ್ತದೆ, ಧನ್ಯವಾದ ಸರ್" ಎಂದು ಬರೆದಿದ್ದಾರೆ.

ಇದೇ ರೀತಿ ವಂಡವಾಸಿಯಿಂದ ಸ್ಪರ್ಧಿಸುತ್ತಿರುವ ಡಿಎಂಕೆ ಅಭ್ಯರ್ಥಿ ಅಂಬೆತ್ ಕುಮಾರ್ ಟ್ವೀಟ್ ಮಾಡಿದ್ದಾರೆ.

2016ರಲ್ಲಿ ತಂಬರಂ ಕ್ಷೇತ್ರದಿಂದ ಗೆದ್ದಿದ್ದ  ಎಸ್ ಆರ್ ರಾಜಾ ಟ್ವೀಟ್ ಮಾಡಿ "ಆತ್ಮೀಯ ಪ್ರಧಾನಿ ನರೇಂದ್ರ ಮೋದಿ, ದಯವಿಟ್ಟು ಟಿಕೆಎಂ ಚಿನ್ನಯ್ಯ ಅವರಿಗಾಗಿ ಪ್ರಚಾರ ನಡೆಸಿ.  ನಾನು ಅವರ ವಿರುದ್ಧ ಕಣಕ್ಕಿಳಿದಿರುವ ಡಿಎಂಕೆ ಅಭ್ಯರ್ಥಿ ಹಾಗೂ ನನ್ನ ವಿಜಯದ ಅಂತರ ಹೆಚ್ಚಿಸಲು ಬಹಳಷ್ಟು ಸಹಾಯವಾಗಲಿದೆ. ಧನ್ಯವಾದಗಳು ಸರ್" ಎಂದು ಬರೆದಿದ್ದಾರೆ.

ಈ ಹಿಂದೆ ಎಂಜಿಆರ್ ಹಾಗೂ ಜಯಲಲಿತಾ ಇಬ್ಬರೂ ಪ್ರತಿನಿಧಿಸಿದ್ದ ಅಂಡಿಪಟ್ಟಿ ಕ್ಷೇತ್ರದ ಹಾಲಿ ಶಾಸಕ ಹಾಗೂ ಡಿಎಂಕೆ ಅಭ್ಯರ್ಥಿ ಎ ಮಹಾರಾಜನ್ ಟ್ವೀಟ್ ಮಾಡಿ "ಆತ್ಮೀಯ ಪ್ರಧಾನಿ ನರೇಂದ್ರ ಮೋದಿ, ದಯವಿಟ್ಟು ಅಂಡಿಪಟ್ಟಿಯ ಎಐಎಡಿಎಂಕೆ ಅಭ್ಯರ್ಥಿ ಪರ ಪ್ರಚಾರ ನಡೆಸಿ. ನಾನು ಅವರ ವಿರುದ್ಧದ ಡಿಎಂಕೆ ಅಭ್ಯರ್ಥಿ. ನಿಮ್ಮ ಪ್ರಚಾರ ನನ್ನ ಗೆಲುವಿನ ಅಂತರ ಹೆಚ್ಚಿಸಲು ಸಹಾಯ ಮಾಡಲು ಬಹಳಷ್ಟು ಪ್ರಯೋಜನವಾಗಲಿದೆ. ಧನ್ಯವಾದಗಳು ಸರ್" ಎಂದು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News