ಬಿಹಾರ: ಪೊಲೀಸ್ ವಿಚಾರಣೆ ಸಂದರ್ಭ ವ್ಯಕ್ತಿ ಸಾವು; ಕಸ್ಟಡಿಯಲ್ಲಿ ಚಿತ್ರಹಿಂಸೆ ಆರೋಪ

Update: 2021-04-04 14:52 GMT

ಪಾಟ್ನ, ಎ.4: ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಿದ ಆರೋಪದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದ ವ್ಯಕ್ತಿಯೊಬ್ಬ ವಿಚಾರಣೆ ಸಂದರ್ಭ ತೀವ್ರ ಅಸ್ವಸ್ಥನಾಗಿ ಬಳಿಕ ಮೃತಪಟ್ಟಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಪೊಲೀಸರ ಚಿತ್ರಹಿಂಸೆಯಿಂದ ಆತ ಮೃತಪಟ್ಟಿರುವುದಾಗಿ ಕುಟುಂಬದವರು ಆರೋಪಿಸಿದ್ದಾರೆ.

ಜಲಸಂಪನ್ಮೂಲ ಇಲಾಖೆಯಲ್ಲಿ ಕ್ಲರ್ಕ್ ಆಗಿರುವ ಸಂಜಯ್ ಕುಮಾರ್ ಯಾದವ್ (45 ವರ್ಷ) ಮಾರ್ಚ್ 29ರ ರಾತ್ರಿ ಹೋಳಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಮನೆಗೆ ಮರಳುತ್ತಿದ್ದಾಗ ಪೊಲೀಸರು ತಡೆದಿದ್ದು ಮದ್ಯಪಾನ ಮಾಡಿದ ಆರೋಪದಲ್ಲಿ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಈ ಸಂದರ್ಭ ಆತ ತೀವ್ರ ಅಸ್ವಸ್ಥನಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಿದ್ದು ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಠಾಣೆಯಲ್ಲಿ ಪೊಲೀಸರ ಥಳಿತದಿಂದ ಯಾದವ್ ಮೃತಪಟ್ಟಿರುವುದಾಗಿ ಕುಟುಂಬದವರು ಆರೋಪಿಸಿದ್ದಾರೆ.

“ತಂದೆಯನ್ನು ಠಾಣೆಗೆ ಕರೆದೊಯ್ದ ಪೊಲೀಸರು ಥಳಿಸಿದ್ದಾರೆ. ಅವರ ಗಂಟಲಿನಲ್ಲಿ ಗಾಯದ ಗುರುತಿದೆ. ಅವರು ಕುತ್ತಿಗೆಗೆ ಹಾಕಿಕೊಂಡಿದ್ದ ಶಾಲನ್ನು ಹಿಡಿದು ಪೊಲೀಸರು ಎಳೆದಿದ್ದರಿಂದ ಈ ಗಾಯವಾಗಿದೆ” ಎಂದು ಯಾದವ್ ಪುತ್ರಿ ಮೋನಿಕಾ ಆರೋಪಿಸಿದ್ದಾಳೆ. ಆದರೆ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಚಿತ್ರಹಿಂಸೆಯ ಬಗ್ಗೆ ಯಾವುದೇ ಉಲ್ಲೇಖವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

 ಪ್ರಕರಣದ ಹಿನ್ನೆಲೆಯಲ್ಲಿ ಬರಾರಿ ಠಾಣೆಯ ಅಧಿಕಾರಿಯನ್ನು ಅಮಾನತುಗೊಳಿಸಿದ್ದು, ಸಾಕ್ಷಾಧಾರಗಳ ಆಧಾರದಲ್ಲಿ ಕೂಲಂಕಷ ತನಿಖೆ ನಡೆಸಲಾಗುವುದು ಎಂದು ಭಾಗಲ್ಪುರ ಹಿರಿಯ ಪೊಲೀಸ್ ಅಧೀಕ್ಷಕಿ ನಿತಾಶಾ ಗುಡಿಯಾ ಹೇಳಿದ್ದಾರೆ. ರಾಜ್ಯದ ಪೊಲೀಸರ ದರ್ಪದ ನಡವಳಿಕೆಗೆ ಇದು ನಿದರ್ಶನವಾಗಿದೆ ಎಂದು ವಿಪಕ್ಷ ನಾಯಕ, ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್ ಪ್ರತಿಕ್ರಿಯಿಸಿದ್ದಾರೆ. ಒತ್ತಡಕ್ಕೆ ಒಳಗಾಗಿ ಜಿಲ್ಲಾಡಳಿತ ಸಾಮಾನ್ಯ ಮರಣೋತ್ತರ ವರದಿ ನೀಡಿದೆ ಎಂದು ಸ್ಥಳೀಯ ಜೆಡಿಯು ಶಾಸಕ ನೀರಜ್ ಕುಮಾರ್ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News