ಹರ್ಯಾಣದಲ್ಲಿ ಕೆಎಂಪಿ ಎಕ್ಸ್‌ಪ್ರೆಸ್‌ವೇ ತಡೆದ ಪ್ರತಿಭಟನಾನಿರತ ರೈತರು

Update: 2021-04-10 15:39 GMT

 ಹೊಸದಿಲ್ಲಿ,ಎ.10: ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆಯನ್ನು ನಡೆಸುತ್ತಿರುವ ರೈತರು ಸರಕಾರಕ್ಕೆ ಎಚ್ಚರಿಕೆಯಾಗಿ ಶನಿವಾರ ಹರ್ಯಾಣದ ಕುಂಡ್ಲಿ-ಮನೇಸರ್-ಪಲ್ವಾಲ್ (ಕೆಎಂಪಿ) ಎಕ್ಸ್‌ಪ್ರೆಸ್ ವೇ ಹೆದ್ದಾರಿಯಲ್ಲಿ ಕೆಲವು ಕಡೆಗಳಲ್ಲಿ ವಾಹನಗಳ ಸಂಚಾರವನ್ನು ತಡೆದರು. ಪ್ರತಿಭಟನಾನಿರತ ರೈತಸಂಘಟನೆಗಳ ಒಕ್ಕೂಟವಾಗಿರುವ ಸಂಯುಕ್ತ ಕಿಸಾನf ಮೋರ್ಚಾ (ಎಸ್‌ಕೆಎಂ) ಕರೆ ನೀಡಿದ್ದ 24 ಗಂಟೆಗಳ ಹೆದ್ದಾರಿ ತಡೆಯು ಬೆಳಿಗ್ಗೆ ಎಂಟು ಗಂಟೆಗೆ ಆರಂಭಗೊಂಡಿತ್ತು. ಪ್ರತಿಭಟನಾನಿರತ ರೈತರು ತುರ್ತು ವಾಹನಗಳ ಸಂಚಾರಕ್ಕೆ ಯಾವುದೇ ಅಡ್ಡಿಯನ್ನುಂಟು ಮಾಡಲಿಲ್ಲ. ಎಕ್ಸ್‌ಪ್ರೆಸ್‌ವೇ ತಡೆಯು ರವಿವಾರ ಬೆಳಿಗ್ಗೆ ಎಂಟು ಗಂಟೆಯವರೆಗೆ ಮುಂದುವರಿಯಲಿದೆ.

136 ಕಿ.ಮೀ.ಉದ್ದದ ಕೆಎಂಪಿ ಎಕ್ಸ್‌ಪ್ರೆಸ್ ವೇ ಅನ್ನು ಪಶ್ಚಿಮ ಹೊರವಲಯ ಎಕ್ಸ್‌ಪ್ರೆಸ್‌ವೇ ಎಂದೂ ಕರೆಯಲಾಗುತ್ತದೆ.

ತನ್ಮಧ್ಯೆ ಹರ್ಯಾಣ ಪೊಲೀಸರು ಕೆಎಂಪಿ ಎಕ್ಸ್‌ಪ್ರೆಸ್‌ವೇ ಅನ್ನು ನಿವಾರಿಸಿ ಪ್ರಯಾಣಿಸುವಂತೆ ವಾಹನಗಳ ಚಾಲಕರು ಮತ್ತು ಪ್ರಯಾಣಿಕರಿಗೆ ಸೂಚಿಸಿದ್ದಾರೆ. ಪೀಡಿತ ಜಿಲ್ಲೆಗಳಲ್ಲಿ,ವಿಶೇಷವಾಗಿ ಸೋನಿಪತ್, ಝಜ್ಜರ್, ಪಾಣಿಪತ್, ರೋಹ್ಟಕ್,ಪಲ್ವಾಲ್,ಫರೀದಾಬಾದ್,ಗುರ್ಗಾಂವ್ ಮತ್ತು ನುಹ್ ಜಿಲ್ಲೆಗಳಲ್ಲಿ ಪರ್ಯಾಯ ಮಾರ್ಗಗಳನ್ನು ಕಲ್ಪಿಸಲಾಗಿದೆ.

ಕೇಂದ್ರವು ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ತಂದಿರುವ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಪಟ್ಟು ಹಿಡಿದಿರುವ ರೈತರು ದಿಲ್ಲಿಯ ಸಿಂಘು,ಟಿಕ್ರಿ ಮತ್ತು ಘಾಝಿಪುರ ಗಡಿಕೇಂದ್ರಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News