ಅಂಬೇಡ್ಕರೋತ್ತರ ಭಾರತದ ಸವಾಲುಗಳು

Update: 2021-04-13 03:35 GMT

ಬುದ್ಧ, ಬಸವಣ್ಣ, ಮಹಾತ್ಮ ಫುಲೆ ಮೊದಲಾದ ದಾರ್ಶನಿಕರ ಆದರ್ಶಗಳಿಂದ ಪ್ರಭಾವಿತರಾದ ಡಾ. ಅಂಬೇಡ್ಕರ್ ಭಾರತದ ಬ್ರಾಹ್ಮಣಶಾಹಿ ಮತ್ತು ಬಂಡವಾಳ ಶಾಹಿಗಳ ವಿರುದ್ಧ ಸಾಮಾಜಿಕ ನ್ಯಾಯಪರ ಹೋರಾಟಗಳನ್ನು ದಿಟ್ಟತನದಿಂದ ನಡೆಸಿದರು. ಅಂಬೇಡ್ಕರ್ ತಾವು ನಂಬಿಕೊಂಡಿದ್ದ ಮೌಲ್ಯಗಳನ್ನು ಅನುಷ್ಠಾನಗೊಳಿಸುವ ವಿಷಯದಲ್ಲಿ ಎಂದಿಗೂ ರಾಜಿ ಮಾಡಿಕೊಂಡವರಲ್ಲ. ಅವರು ತಮ್ಮ ಜೀವನದುದ್ದಕ್ಕೂ ಹೋರಾಟದ ರಾಜಕಾರಣ ಮಾಡಿದರೇ ಹೊರತು ಅವಕಾಶವಾದಿ ರಾಜಕಾರಣ ಮಾಡಲಿಲ್ಲ. ಅವರು ತಮ್ಮ ಬದುಕಿನಲ್ಲಿ ಶೋಷಿತ ಭಾರತೀಯರ ಹಿತರಕ್ಷಣೆ ಮಾಡುವ ಸಲುವಾಗಿ ಸಿಹಿಗಿಂತ ಕಹಿಯನ್ನೇ ಉಂಡಿದ್ದು ಹೆಚ್ಚು. ಮಾನವೀಯತೆಯೊಂದೇ ತನ್ನ ಜಾತಿ ಮತ್ತು ಜೀವನಧರ್ಮ ಎಂದು ತಮ್ಮ ಹೋರಾಟ ಮತ್ತು ಸಾಧನೆಗಳ ಮೂಲಕ ಸಾಬೀತುಪಡಿಸಿದ ಮಹಾನ್ ಕ್ರಾಂತಿಕಾರಿ ಅಂಬೇಡ್ಕರ್ ಎಂಬುದನ್ನು ಈ ಸಂದರ್ಭದಲ್ಲಿ ನೆನಪು ಮಾಡಿಕೊಳ್ಳುವುದು ಔಚಿತ್ಯಪೂರ್ಣವಾಗಿದೆ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳು, ಹೋರಾಟಗಳು ಮತ್ತು ಕೊಡುಗೆಗಳು ಸಮಸ್ತ ಭಾರತೀಯರ ವರ್ತಮಾನಕ್ಕೆ ಎಚ್ಚರಿಕೆ ಹಾಗೂ ಭವಿಷ್ಯಕ್ಕೆ ಮಾರ್ಗಸೂಚಿ. ಅಂಬೇಡ್ಕರ್ ಸಮಸ್ತ ಭಾರತೀಯರ ಒಳಗೊಳ್ಳುವ ಅಭಿವೃದ್ಧಿಗಾಗಿ ನೀಡಿರುವ ಕೊಡುಗೆಗಳು ಅನನ್ಯ. ಅವರನ್ನು ಇಡೀ ವಿಶ್ವ ಇಂದು ಜ್ಞಾನದ ಸಂಕೇತ ಮತ್ತು ವಿಮೋಚನೆಯ ಮಹಾಶಕ್ತಿಯೆಂದು ಗೌರವಿಸುತ್ತಿದೆ. ಅಂಬೇಡ್ಕರೋತ್ತರ ಭಾರತದಲ್ಲಿ ಹಲವಾರು ಗಂಭೀರ ಸವಾಲುಗಳು ಎದುರಾಗಿವೆ. ಸಮಸ್ತ ಶೋಷಿತ ಜನಾಂಗಗಳು ಅಂಬೇಡ್ಕರ್ ನೇತೃತ್ವದಲ್ಲಿ ಒಗ್ಗೂಡಿ ವಿಮೋಚನೆ ಮತ್ತು ಸಬಲೀಕರಣದೆಡೆಗೆ ಮುನ್ನಡೆಯಬೇಕೆಂಬ ಸಮಾಜವಾದಿ ನಾಯಕ ರಾಮಮನೋಹರ ಲೋಹಿಯಾ ವಿಚಾರಧಾರೆ ವಿಶೇಷ ಮಹತ್ವ ಹೊಂದಿದೆ.

ಸಂವಿಧಾನ ರಕ್ಷಣೆ
ಪ್ರಸ್ತುತ ಸಂದರ್ಭದಲ್ಲಿ ಪ್ರಬುದ್ಧ ಭಾರತ ನಿರ್ಮಾಣಕ್ಕೆ ಪೂರಕವಾಗಿರುವ ಸಂವಿಧಾನವನ್ನು ವಿಸ್ತೃತವಾಗಿ ಮತ್ತು ವಿಮರ್ಶಾತ್ಮಕವಾಗಿ ಅಧ್ಯಯನ ಮಾಡುವ ಅವಶ್ಯಕತೆಯಿದೆ. ಅಂಬೇಡ್ಕರ್ ಸಂವಿಧಾನವನ್ನು ಕುರಿತ ಸ್ವತಂತ್ರ ಮತ್ತು ವೈಜ್ಞಾನಿಕ ವಿಶ್ಲೇಷಣೆಗಳು ಭಾರತೀಯರ ಬಿಡುಗಡೆಯ ಮಾರ್ಗಗಳು ಎಂದು ಪ್ರತಿಪಾದಿಸಿದ್ದರು. ಭಾರತೀಯ ಸಂವಿಧಾನ ಜಾರಿಗೊಂಡು 71 ವರ್ಷಗಳು ಸಂದಿದ್ದರೂ ಶ್ರೀಮಂತರು-ಬಡವರ ನಡುವಿನ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ ಅಗಾಧವಾಗಿ ಬೆಳೆದಿದೆ. ಜಾತಿ ಕೇಂದ್ರಿತ ಅಪಮಾನ, ಅಸ್ಪಶ್ಯತೆ, ತಾರತಮ್ಯಗಳು ಮತ್ತು ಶೋಷಣಾ ಪ್ರವೃತ್ತಿಗಳಿಂದ ಭಾರತದ ಬಹುಜನರ ಬದುಕು ದಯನೀಯವಾಗಿದೆ. ಇಂದು ನಮ್ಮನ್ನಾಳುತ್ತಿರುವ ಮಾರುಕಟ್ಟೆ ಶಕ್ತಿಗಳು ಮತ್ತು ಮನುವಾದಿಗಳು ಸಾಂವಿಧಾನಿಕ ಆಶಯಗಳನ್ನು ಖಾಸಗೀಕರಣದ ಹೆಸರಿನಲ್ಲಿ ದುರ್ಬಲಗೊಳಿಸಿವೆ. ಬಲಪಂಥೀಯ ರಾಜಕಾರಣ ಮತ್ತು ಮಾರುಕಟ್ಟೆ ಶಕ್ತಿಗಳ ಪ್ರಾಬಲ್ಯಗಳಿಂದಾಗಿ ಸಾಮಾಜಿಕ ಪ್ರಜಾಸತ್ತೆ ಮತ್ತು ಆರ್ಥಿಕ ಸಮಾನತೆಗಳಿಗೆ ಹಿನ್ನಡೆಯುಂಟಾಗಿದೆ. ಸಂವಿಧಾನ ರಚನೆಯ ಸಂದರ್ಭದಲ್ಲಿ ಅಂಬೇಡ್ಕರ್ ವ್ಯಕ್ತಪಡಿಸಿದ್ದ ಹಲವು ಆತಂಕಗಳು ಇಂದಿಗೂ ಪ್ರಸ್ತುತವಾಗಿವೆ. ಸಂವಿಧಾನವನ್ನು ಉಳಿಸಿಕೊಂಡು ತಮ್ಮ ಮಾನವ ಹಕ್ಕುಗಳನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ದೇಶಬಾಂಧವರೇ ಆದ ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ಸಮುದಾಯಗಳು ಒಗ್ಗೂಡಿ ಪ್ರಜಾಸತ್ತಾತ್ಮಕ ಹೋರಾಟ ನಡೆಸಬೇಕಾಗಿದೆ.

ಪ್ರಜಾಪ್ರಭುತ್ವ ರಕ್ಷಣೆ
ಜಾತಿವಿನಾಶ ಚಳವಳಿಯಿಂದ ಸಾಮಾಜಿಕ ಪ್ರಜಾಸತ್ತೆ ಮತ್ತು ಪ್ರಾತಿನಿಧಿಕ ರಾಜಕೀಯ ಮೀಸಲಾತಿಯಿಂದ ಆರ್ಥಿಕ ಪ್ರಜಾಸತ್ತೆಗಳು ರೂಪುಗೊಳ್ಳುತ್ತವೆಯೆಂಬ ಅಂಬೇಡ್ಕರ್ ವಾದಕ್ಕೆ ಇಂದು ದೇಶವನ್ನಾಳುತ್ತಿರುವವರಿಂದ ಬಹುದೊಡ್ಡ ಗಂಡಾಂತರ ಉಂಟಾಗಿದೆ. ಭಾರತದಲ್ಲಿ ಪ್ರಜಾಸತ್ತೆ ಮಹಿಳೆಯರು ಮತ್ತು ದುರ್ಬಲ ವರ್ಗಗಳ ಸಾಮಾಜಿಕ ಅಸಮಾನತೆ ಮತ್ತು ಅಸಮರ್ಪಕ ರಾಜಕೀಯ ಸಹಭಾಗಿತ್ವಕ್ಕೆ ಅನುವು ಮಾಡಿಕೊಟ್ಟಿದೆ. ಸಮಾನಾಂತರ ಸಮಾಜ ಮತ್ತು ಆರ್ಥಿಕ ಪ್ರಜಾಸತ್ತೆಗಳನ್ನು ಬಲಪಡಿಸುವಲ್ಲಿ ಭಾರತದ ಜಾತಿವ್ಯವಸ್ಥೆ ಮತ್ತು ಸಂಪತ್ತಿನ ಕೇಂದ್ರೀಕರಣಗಳು ಪ್ರಧಾನವಾಗಿ ಅಡ್ಡಬಂದಿವೆ. ಏಕತ್ವ ಸಂಸ್ಕೃತಿ ಮತ್ತು ಕೇಂದ್ರೀಕೃತ ವ್ಯವಸ್ಥೆಯ ಪ್ರತಿಪಾದಕರು ರಾಜ್ಯಾಧಿಕಾರವನ್ನು ಗಳಿಸಿದ ನಂತರ ರಾಷ್ಟ್ರೀಯ ಏಕತೆ ಮತ್ತು ಒಕ್ಕೂಟ ತತ್ವಗಳಿಗೆ ಧಕ್ಕೆಯುಂಟಾಗಿದೆ. ಪ್ರಜಾಸತ್ತೆಯ ರಕ್ಷಣೆಗಾಗಿ ಕಂಕಣ ಬದ್ಧರಾಗಿ ಹೋರಾಡುವವರನ್ನು ಕರಾಳ ಶಾಸನಗಳ ಮೂಲಕ ದಮನಗೊಳಿಸಿ ಪ್ರಜಾಸತ್ತೆಯನ್ನು ದುರ್ಬಲಗೊಳಿಸಲಾಗುತ್ತಿದೆ. ಎಲ್ಲ ಪ್ರಜೆಗಳ ಮಾನವ ಹಕ್ಕುಗಳನ್ನು ರಕ್ಷಿಸುವುದರ ಮೂಲಕ ಭಾರತೀಯ ಪ್ರಜಾಸತ್ತೆಯನ್ನು ಬಲಪಡಿಸುವ ಅವಶ್ಯಕತೆ ಇಂದು ಹೆಚ್ಚಾಗಿದೆ. ಬಹುತ್ವ ರಕ್ಷಣೆ ಲೋಕಾಯತ, ಚಾರ್ವಾಕ, ಬುದ್ಧ, ಫುಲೆ, ಪೆರಿಯಾರ್, ಅಂಬೇಡ್ಕರ್ ಮೊದಲಾದವರ ದರ್ಶನಗಳು ಪ್ರಕೃತಿ ಮತ್ತು ವಿಜ್ಞಾನಗಳಿಗೆ ಅನುಗುಣವಾಗಿ ಬಹುಜನರಿಗೆ ವಿಮೋಚನೆಯ ಹಾದಿಯನ್ನು ಸೂಚಿಸುತ್ತದೆ. ವೇದಾಂತವು ಏಕತ್ವ ಪ್ರತಿಪಾದಕರಾದ ಹಿಂದುತ್ವವಾದಿಗಳಿಗೆ ಪ್ರಬಲವಾದ ಅಸ್ತ್ರವಾಗಿದ್ದರೆ, ಅಂಬೇಡ್ಕರ್ ವಿರಚಿತ ಸಂವಿಧಾನ ಬಹುಜನ ಮೂಲಭೂತ ಹಕ್ಕುಗಳನ್ನು ರಕ್ಷಿಸುವ ಆಶಯಗಳನ್ನು ಒಳಗೊಂಡಿದೆ. ಹಿಂದುತ್ವವು ಭಾರತದ ಬಹುಜನರನ್ನು ಏಕಸಂಸ್ಕೃತಿಯನ್ನು ಹೇರುವುದರ ಮೂಲಕ ಸಂಪೂರ್ಣವಾಗಿ ಆಪೋಷಣ ತೆಗೆದುಕೊಳ್ಳುತ್ತದೆ. ಬಹುಜನರ ಹೋರಾಟಗಳು ಬ್ರಾಹ್ಮಣ್ಯಕ್ಕೆ ತಿರುಗುಬಾಣವಾದ ಬುದ್ಧನ ರಾಜಕೀಯ ಮೀಮಾಂಸೆಯನ್ನು ವಿಸ್ತೃತವಾಗಿ ಸಾಂಸ್ಥೀಕರಣಗೊಳಿಸಲು ಕಾರಣವಾದವು. ಮನುವಾದಿ ಪುರೋಹಿತಶಾಹಿ ಭಾರತ ಮತ್ತು ಅಂಬೇಡ್ಕರ್ ಅವರ ಸಮಾನತೆಯ ಭಾರತ ಮುಖಾಮುಖಿಯಾಗಿ ನಿಂತಿವೆ. ಬಹುತ್ವ ಸಂವರ್ಧನೆ ಭಾರತದ ಅಖಂಡತೆ ಮತ್ತು ಸಾರ್ವಭೌಮತ್ವಗಳನ್ನು ರಕ್ಷಿಸಬಲ್ಲದು. ಅಂಬೇಡ್ಕರ್ ತಮ್ಮ ಕೊನೆಯ ಉಸಿರು ಇರುವ ತನಕ ಬಹುತ್ವದ ಸಮರ್ಥಕರಾಗಿ ಮತ್ತು ಬಹುಜನರ ಉದ್ಧಾರಕರಾಗಿ ದುಡಿದರು.

ಧರ್ಮನಿರಪೇಕ್ಷತೆ ರಕ್ಷಣೆ
ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಬಹುತ್ವ ಮತ್ತು ಧರ್ಮನಿರಪೇಕ್ಷತೆಗಳನ್ನು ಬೌದ್ಧ ಬಿಕ್ಕುಗಳು, ಸೂಫಿಸಂತರು, ದಾಸ ಶ್ರೇಷ್ಠರು, ಸಮಾಜ ಸುಧಾರಕರು, ಮುತ್ಸದ್ದಿಯಾದಿಗಳಾಗಿ ಎಲ್ಲರೂ ರಕ್ಷಿಸುವ ಕಾಯಕದಲ್ಲಿ ಪ್ರಜ್ಞಾಪೂರ್ವಕವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಭಾರತವು ಧರ್ಮ ನಿರಪೇಕ್ಷತೆಯನ್ನು ಪ್ರಜ್ಞಾಪೂರ್ವಕವಾಗಿ ಪ್ರಮುಖ ಸಾಂವಿಧಾನಿಕ ಮೌಲ್ಯ ಹಾಗೂ ಜೀವನ ವಿಧಾನವನ್ನಾಗಿ ಒಳಗೊಂಡಿದೆ. ಮೌರ್ಯರ ಕಾಲದಲ್ಲಿ ಬೌದ್ಧ ಭಾರತವು ವಿಶ್ವದಲ್ಲಿಯೇ ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವ, ಸಾಮಾಜಿಕ ನ್ಯಾಯ, ಆರ್ಥಿಕ ಪ್ರಜಾಸತ್ತೆ ಮೊದಲಾದವುಗಳನ್ನು ಸಾಧಿಸಿ ಜಗತ್ತಿನ ದೊಡ್ಡಣ್ಣನಾಗಿ ಮನ್ನಣೆಗಳಿಸಿತು. ಹಿಂದುತ್ವವಾದದ ಪ್ರಧಾನ ಪ್ರವರ್ತಕರಾದ ಹೆಗಡೆವಾರ್, ಸಾವರ್ಕರ್, ಗೋಳ್ವಾಲ್ಕರ್ ಮೊದಲಾದ ಯೆಹೂದಿ ಮೂಲದ ಚಿತ್ಪಾವನ ಬ್ರಾಹ್ಮಣ ಮೂಲದ ನಾಯಕರು ಬಹುತ್ವದ ಮತ್ತು ಧರ್ಮನಿರಪೇಕ್ಷತೆ ಆಶಯಗಳನ್ನು ಅನುಷ್ಠಾನಗೊಳಿಸಲು ತೀವ್ರ ಪ್ರತಿರೋಧ ವ್ಯಕ್ತಪಡಿಸಿದರು. ಇಂದು ಭಾರತವನ್ನು ಆಳುತ್ತಿರುವವರು ಭಾರತದ ಬಹುಜನರನ್ನು ಅಸಮಾನತೆಯಿಂದ ಸಮಾನತೆಯೆಡೆಗೆ ಮುನ್ನಡೆಸಬಹುದೆಂಬ ಅಂಬೇಡ್ಕರ್, ಪೆರಿಯಾರ್, ಲೋಹಿಯಾ, ನಾರಾಯಣ ಗುರು ಮೊದಲಾದವರ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ಹಿಂದೂ ರಾಷ್ಟ್ರೀಯತೆಯಿಂದಾಗಿ ದೇಶದ ಸಾಂವಿಧಾನಿಕ ಮೂಲತತ್ವಗಳಲ್ಲಿ ಒಂದಾದ ಧರ್ಮ ನಿರಪೇಕ್ಷತೆಗೆ ಧಕ್ಕೆಯುಂಟಾಗಿದೆ. ಧರ್ಮ ನಿರಪೇಕ್ಷತೆಯನ್ನು ರಕ್ಷಿಸಿ ಭಾರತವನ್ನು ಪ್ರಗತಿಯತ್ತ ಕೊಂಡೊಯ್ಯುವುದು ನಮ್ಮ ಕಾಲದ ಬಹು ದೊಡ್ಡ ಸಾಮಾಜಿಕ ಜವಾಬ್ದಾರಿಯಾಗಿದೆ.

ಜಾತಿ ವಿನಾಶ
ಪ್ರಕೃತಿ ಧರ್ಮಕ್ಕೆ ವಿರುದ್ಧವಾದ ಮೇಲು-ಕೀಳುಗಳನ್ನು ಆಧರಿಸಿದ ಅವೈಜ್ಞಾನಿಕ ಜಾತಿಪದ್ಧತಿಯನ್ನು ರೂಪಿಸಿದ ಕಾರಣ ಶೋಷಿತ ಸಮುದಾಯಗಳಿಗೆ ಸಾಮಾಜಿಕ ಹಾಗೂ ಆರ್ಥಿಕ ಸಮಾನತೆಗಳು ಲಭಿಸಿಲ್ಲ. ಜಾತಿ ವ್ಯವಸ್ಥೆಯಿಂದಾಗಿಯೇ ಭಾರತದಲ್ಲಿ ಶ್ರಮಿಕರನ್ನು ಒಗ್ಗೂಡಿಸುವ ಬದಲಿಗೆ ವಿಭಜಿಸಿ ಶ್ರೇಣೀಕರಣ ಪ್ರಕ್ರಿಯೆಯಲ್ಲಿ ಸೇರಿಸಲಾಗಿದೆ. ಜಗತ್ತಿನಲ್ಲಿ ಎಲ್ಲಿಯೂ ಕಂಡುಬರದ ಶ್ರಮಿಕರ ವಿಭಜನೆ ನಿಸರ್ಗದ ನಿಯಮಗಳಿಗೆ ವಿರುದ್ಧವಾಗಿದೆ. ಶೂದ್ರ ಸಮುದಾಯಗಳನ್ನು ನಿರಂತರವಾಗಿ ಗುಲಾಮಗಿರಿಗೆ ದಬ್ಬುವ ಚಾತುರ್ವರ್ಣ ವ್ಯವಸ್ಥೆ ಸಂವಿಧಾನ ವಿರೋಧಿಯಾಗಿದೆ. ಜಾತಿಯ ತಳಹದಿಯ ಮೇಲೆ ಪ್ರಜಾಪ್ರಭುತ್ವ ಸೌಧವನ್ನು ಕಟ್ಟಲಾಗದು ಮತ್ತು ಭಾರತೀಯರನ್ನು ಸಮಗ್ರ ಅಭಿವೃದ್ಧಿಯೆಡೆಗೆ ಮುನ್ನಡೆಸಲಾಗದೆಂಬ ಸತ್ಯದರ್ಶನ ಇಂದು ಅತ್ಯವಶ್ಯಕ. ಆರ್ಥಿಕ ಉದಾರೀಕರಣದ ಯುಗದಲ್ಲಿ ಇಂದು ನಮ್ಮನ್ನು ಆಳುವವರು ಬಡತನ ನಿರ್ಮೂಲನೆ ಹೆಸರಿನಲ್ಲಿ ಬಡವರ ನಿರ್ಮೂಲನೆ ಕಾಯಕದಲ್ಲಿ ನಿರತರಾಗಿರುವುದು ಮಾನವೀಯತೆಗೆ ಬಗೆದಿರುವ ಬಹುದೊಡ್ಡ ಅಪಚಾರವಾಗಿದೆ.

ಭಾರತವನ್ನು ಮೌರ್ಯರು ಮಾನವ ಮಂಟಪವನ್ನಾಗಿ ರೂಪಿಸಿದರೆ ಇಂದು ಸಂಘ ಪರಿವಾರಿಗರು ಬಲಿಪೀಠವನ್ನಾಗಿ ಪರಿವರ್ತಿಸಿ ಬಹುಜನರ ಮೂಲಭೂತ ಹಕ್ಕುಗಳು ಮತ್ತು ಒಳಗೊಳ್ಳುವ ಅಭಿವೃದ್ಧಿಗೆ ಬಹುದೊಡ್ಡ ಅಡ್ಡಗಲ್ಲಾಗಿದ್ದಾರೆ. ಇತ್ತೀಚೆಗೆ ಭಾರತದ ಧರ್ಮ ನಿರಪೇಕ್ಷತೆ ಕೇಂದ್ರಿತ ಸಂವಿಧಾನಕ್ಕೆ ಪೌರತ್ವ ಕಾಯ್ದೆ ತಿದ್ದುಪಡಿ ಮಸೂದೆ ಗಂಭೀರ ಬೆದರಿಕೆ ಒಡ್ಡಿರುವುದಲ್ಲದೆ ಭಾರತದಲ್ಲಿ ಏಕಶ್ರೇಣಿಯ ಪೌರತ್ವವನ್ನು ರೂಪಿಸಿ ಅಲ್ಪಸಂಖ್ಯಾತರನ್ನು ರಾಷ್ಟ್ರೀಯ ಮುಖ್ಯವಾಹಿನಿಯಿಂದ ಹೊರದಬ್ಬುವ ಗೌಪ್ಯ ಕಾರ್ಯಸೂಚಿ ಹೊಂದಿದೆ. ಎಲ್ಲ ಭಾರತೀಯರಿಗೂ ಮೂಲಭೂತ ಹಕ್ಕುಗಳನ್ನು ನೀಡಿ ಅವರಿಗೆ ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ಸಮಾನತೆಗಳನ್ನು ಒದಗಿಸಬಲ್ಲ ಏಕೈಕ ರಾಜಮಾರ್ಗವೆಂದರೆ ಅಂಬೇಡ್ಕರ್ ಪ್ರತಿಪಾದಿಸಿದ ಮಾನವತಾವಾದ. ಶೋಷಿತ ಜನವರ್ಗಗಳು ಅಂಬೇಡ್ಕರ್ ವಿರಚಿತ ಸಂವಿಧಾನವನ್ನು ರಕ್ಷಿಸಿ ಭಾರತವನ್ನು ಪ್ರಬುದ್ಧ ರಾಷ್ಟ್ರವನ್ನಾಗಿ ರೂಪಿಸುವ ಸವಾಲನ್ನು ಆತ್ಮವಿಶ್ವಾಸದಿಂದ ನಿರ್ವಹಿಸಬೇಕು.

Writer - ಡಾ. ಬಿ.ಪಿ ಮಹೇಶ ಚಂದ್ರ ಗುರು

contributor

Editor - ಡಾ. ಬಿ.ಪಿ ಮಹೇಶ ಚಂದ್ರ ಗುರು

contributor

Similar News