ಒಲಿಂಪಿಕ್ಸ್ ಚಾಂಪಿಯನ್ ಅರ್ಜೆಂಟೀನ ವಿರುದ್ಧ ಭಾರತಕ್ಕೆ ಸುಲಭ ಜಯ

Update: 2021-04-13 05:01 GMT

ಬ್ಯುನಸ್ ಐರಿಸ್: ಒಲಿಂಪಿಕ್ಸ್ ಚಾಂಪಿಯನ್ ಅರ್ಜೆಂಟೀನ ವಿರುದ್ಧ ಇಲ್ಲಿ ನಡೆಯುತ್ತಿರುವ ಎಫ್‌ಐಎಚ್ ಪ್ರೊ ಹಾಕಿ ಲೀಗ್‌ನಲ್ಲಿ ಭಾರತೀಯ ಪುರುಷರ ಹಾಕಿ ತಂಡ 3-0 ಗೋಲುಗಳ ಅಂತರದಿಂದ ಸುಲಭ ಜಯ ದಾಖಲಿಸಿದೆ. ಈ ಗೆಲುವಿ ನೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ.

ಹರ್ಮನ್‌ಪ್ರೀತ್ ಸಿಂಗ್(11ನೇ ನಿಮಿಷ), ಲಲಿತ್ ಉಪಾಧ್ಯಾಯ(25ನೇ ನಿಮಿಷ) ಹಾಗೂ ಮನ್‌ದೀಪ್ ಸಿಂಗ್(58ನೇ ನಿಮಿಷ)ತಲಾ ಒಂದು ಗೋಲು ಗಳಿಸಿ ಪ್ರವಾಸಿ ತಂಡವು ಸುಲಭ ಜಯ ದಾಖಲಿಸುವಲ್ಲಿ ಮಹತ್ವದ ಕೊಡುಗೆ ನೀಡಿದರು.

ಭಾರತವು ಶನಿವಾರ ನಡೆದ ಲೀಗ್‌ನ ಮೊದಲ ಪಂದ್ಯದಲ್ಲಿ ಆತಿಥೇಯ ಅರ್ಜೆಂಟೀನದ ವಿರುದ್ಧ 2-2ರಿಂದ ಡ್ರಾ ಸಾಧಿಸಿದ ಬಳಿಕ ಶೂಟೌಟ್‌ನಲ್ಲಿ ಗೆಲುವು ದಾಖಲಿಸಿ ಬೋನಸ್ ಅಂಕ ಪಡೆದಿತ್ತು.

ಈ ಗೆಲುವಿನ ಮೂಲಕ ಭಾರತವು 8 ಪಂದ್ಯಗಳಲ್ಲಿ ಒಟ್ಟು 15 ಅಂಕಗಳನ್ನು ಜಮೆ ಮಾಡಿ ಎಫ್‌ಐಎಚ್ ಹಾಕಿ ಪ್ರೊಲೀಗ್ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ. 8 ಪಂದ್ಯಗಳನ್ನಾಡಿರುವ ಆಸ್ಟ್ರೇಲಿಯಕ್ಕಿಂತ ಒಂದು ಅಂಕ ಮುಂದಿದೆ.

ಭಾರತ, ಅರ್ಜೆಂಟೀನ ಹಾಗೂ ಆಸ್ಟ್ರೇಲಿಯ ತಂಡಗಳು ಮುಂಬರುವ ಒಲಿಂಪಿಕ್ ಗೇಮ್ಸ್‌ನಲ್ಲಿ ಪರಸ್ಪರ ಸೆಣಸಾಡಲಿವೆ. ಈ ತಂಡಗಳು ‘ಎ’ ಗುಂಪಿನಲ್ಲಿ ಸ್ಪೇನ್, ನ್ಯೂಝಿಲ್ಯಾಂಡ್ ಹಾಗೂ ಆತಿಥೇಯ ಫೇವರಿಟ್ ತಂಡ ಜಪಾನ್‌ನೊಂದಿಗೆ ಸ್ಥಾನ ಪಡೆದಿವೆ.

ಅರ್ಜೆಂಟೀನ ಎಫ್‌ಐಎಚ್ ಹಾಕಿ ಪ್ರೊ ಲೀಗ್ ಅಂಕಪಟ್ಟಿಯಲ್ಲಿ 12 ಪಂದ್ಯಗಳಲ್ಲಿ 11 ಅಂಕಗಳನ್ನು ಗಳಿಸುವುದರೊಂದಿಗೆ ಆರನೇ ಸ್ಥಾನದಲ್ಲಿದೆ. ಅರ್ಜೆಂಟೀನಕ್ಕೆ ಉತ್ತಮ ಆರಂಭ ಪಡೆಯುವ ಅವಕಾಶವಿತ್ತು. ಭಾರತದ ಗೋಲ್‌ಕೀಪರ್ ಕೃಷ್ಣಬಹದ್ದೂರ್ ಪಾಠಕ್ ಎರಡು ಬಾರಿ ಮಾರ್ಟಿನ್ ಫೆರೆರೊಗೆ ಗೋಲು ಗಳಿಸುವುದನ್ನು ನಿರಾಕರಿಸಿದರು.

ಹರ್ಮನ್‌ಪ್ರೀತ್ ಅವರು 11ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿದರು. ಎರಡನೇ ಕ್ವಾರ್ಟರ್‌ನ 25ನೇ ನಿಮಿಷದಲ್ಲಿ ಗೋಲು ಗಳಿಸಿದ ಲಲಿತ್ ಉಪಾಧ್ಯಾಯ ಭಾರತದ ಮುನ್ನಡೆಯನ್ನು 2-0ಗೆ ವಿಸ್ತರಿಸಿದರು. ಪಂದ್ಯ ಮುಗಿಯಲು ಎರಡು ನಿಮಿಷ ಬಾಕಿ ಇರುವಾಗ ಮನ್‌ದೀಪ್ ಸಿಂಗ್ ಗೋಲು ಜಮೆ ಮಾಡಿ ಭಾರತಕ್ಕೆ 3-0 ಅಂತರದಿಂದ ಭರ್ಜರಿ ಗೆಲುವು ತಂದುಕೊಟ್ಟರು.

ಅತ್ಯುತ್ತಮ ಗೋಲ್‌ಕೀಪಿಂಗ್‌ನಿಂದ ಮಿಂಚಿದ ಪಾಠಕ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಭಾರತವು ಮೇ 8 ಹಾಗೂ 9ರಂದು ನಡೆಯಲಿರುವ ಪಂದ್ಯದಲ್ಲಿ ಆಡಲು ಗ್ರೇಟ್ ಬ್ರಿಟನ್‌ಗೆ ಪ್ರಯಾಣ ಬೆಳೆಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News