ದಿಲ್ಲಿಯಲ್ಲಿ ವಾರಾಂತ್ಯದಲ್ಲಿ ಕರ್ಫ್ಯೂ: ಅರವಿಂದ ಕೇಜ್ರಿವಾಲ್

Update: 2021-04-15 18:33 GMT

ಹೊಸದಿಲ್ಲಿ, ಎ. 15: ಕೊರೋನ ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ವಾರಾಂತ್ಯದಲ್ಲಿ ಕರ್ಫ್ಯೂ ಹೇರಲು ನಿರ್ಧರಿಸಲಾಗಿದೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಗುರುವಾರ ಹೇಳಿದ್ದಾರೆ. ಪ್ರತಿ ಶನಿವಾರ ಹಾಗೂ ರವಿವಾರ ಕರ್ಫ್ಯೂ ವಿಧಿಸುವ ಮೂಲಕ ಜನರ ಮುಕ್ತ ಸಂಚಾರಕ್ಕೆ ಕಡಿವಾಣ ಹಾಕಲಾಗುವುದು. ಆ ಮೂಲಕ ಕೊರೋನ ನಿಯಂತ್ರಣಕ್ಕೆ ಪ್ರಯತ್ನಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ವಾರಾಂತ್ಯದ ಕರ್ಫ್ಯೂ ಸಂದರ್ಭ ಅಡಿಟೋರಿಯಂ, ರೆಸ್ಟೋರೆಂಟ್, ಮಾಲ್, ಜಿಮ್ ಸ್ಪಾಗಳು ಮುಚ್ಚಿರಲಿವೆ. ಸಿನೆಮಾ ಮಂದಿರಗಳು ಶೇ. 30ರಷ್ಟು ಪ್ರೇಕ್ಷಕರೊಂದಿಗೆ ಕಾರ್ಯಾಚರಿಸಲಿವೆ. 

ರೆಸ್ಟೋರೆಂಟ್ಗಳಲ್ಲಿ ಕುಳಿತು ಆಹಾರ ಸೇವಿಸುವಂತಿಲ್ಲ. ಆದರೆ, ಆಹಾರವನ್ನು ಮನೆಗೆ ತಲುಪಿಸಲು ಅವಕಾಶ ಇರುತ್ತದೆ ಎಂದು ಅವರು ತಿಳಿಸಿದ್ದಾರೆ. ಮನ್ಸಿಪಲ್ ವಲಯದಲ್ಲಿ ಪ್ರತಿ ದಿನ ಒಂದು ಸಂತೆ ನಡೆಸಲು ಮಾತ್ರ ಅವಕಾಶ ನೀಡಲಾಗುತ್ತದೆ. ಅಗತ್ಯ ಸೇವೆಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ. ಆಸ್ಪತ್ರೆ, ರೈಲು ನಿಲ್ದಾಣ, ವಿಮಾನ ನಿಲ್ದಾಣಕ್ಕೆ ತೆರಳುವವರಿಗೆ ಕರ್ಫ್ಯೂ ಸಂದರ್ಭ ತಡೆ ಒಡ್ಡುವುದಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ. ಸಾಮಾಜಿಕ, ಧಾರ್ಮಿಕ ಅಥವಾ ರಾಜಕೀಯ ಸೇರಿದಂತೆ ಎಲ್ಲ ಸಭೆಗಳಿಗೆ ನಿಷೇಧ ವಿಧಿಸಲಾಗಿದೆ. ವಿವಾಹದಲ್ಲಿ 50 ಮಂದಿ ಹಾಗೂ ಅಂತ್ಯಕ್ರಿಯೆಯಲ್ಲಿ 20 ಮಂದಿ ಪಾಲ್ಗೊಳ್ಳುವುದಕ್ಕೆ ಮಿತಿ ವಿಧಿಸಲಾಗಿದೆ. ಅಗತ್ಯ ಸೇವೆಗಳು ಹಾಗೂ ಇತರ ಅನುಮತಿಸಿರುವ ಚಟುವಟಿಕೆಗಳಿಗೆ ಮಾತ್ರ ಕರ್ಫ್ಯೂ ಪಾಸ್ ವಿತರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. 

ಕೊರೋನ ಸೋಂಕಿತರ ಚಿಕಿತ್ಸೆಗೆ ಅಗತ್ಯ ಇರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿರುವ ಕೇಜ್ರಿವಾಲ್, ನಗರದ ವಿವಿಧ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಆಮ್ಲಜನಕ ಸೌಲಭ್ಯ ಸಹಿತ 5 ಸಾವಿರ ಹಾಸಿಗೆಗಳು ಲಭ್ಯವಿವೆ. ಆದರೆ, ಕೊರೋನ ಸೋಂಕಿತರು ನಿರ್ದಿಷ್ಟ ಆಸ್ಪತ್ರೆಯಲ್ಲೇ ದಾಖಲಾಗಲು ಬೇಡಿಕೆ ಇರಿಸದೆ, ಹಾಸಿಗೆ ಖಾಲಿ ಇರುವಲ್ಲಿ ದಾಖಲಾಗುವಂತೆ ಮನವಿ ಮಾಡಿದ್ದಾರೆ. ಕೊರೋನ ನಿಯಂತ್ರಣದ ನಿಟ್ಟಿನಲ್ಲಿ ಸಾರ್ವಜನಿಕರು ಸರಕಾರದೊಂದಿಗೆ ಕೈಜೋಡಿಸಬೇಕಿದೆ. ಮಾಸ್ಕ್, ಸ್ಯಾನಿಟೈಸರ್ ಬಳಸಬೇಕಿದೆ ಹಾಗೂ ಸುರಕ್ಷಿತ ಅಂತರ ಕಾಯ್ದುಗೊಳ್ಳಬೇಕಿದೆ ಎಂದು ಅರವಿಂದ ಕೇಜ್ರಿವಾಲ್ ಅವರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News