50,000 ಟನ್ ವೈದ್ಯಕೀಯ ಆಮ್ಲಜನಕ ಆಮದು ಮಾಡಿಕೊಳ್ಳಲಿರುವ ಭಾರತ

Update: 2021-04-16 15:22 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಎ.16: ದೈನಂದಿನ ಕೊರೋನ ವೈರಸ್ ಪ್ರಕರಣಗಳಲ್ಲಿ ಏರಿಕೆಯಿಂದಾಗಿ ಬೇಡಿಕೆಯು ತೀವ್ರವಾಗಿ ಹೆಚ್ಚಿರುವ ಹಿನ್ನೆಲೆಯಲ್ಲಿ 50,000 ಟನ್ ವೈದ್ಯಕೀಯ ಆಮ್ಲಜನಕವನ್ನು ಆಮದು ಮಾಡಿಕೊಳ್ಳಲು ಕೇಂದ್ರವು ನಿರ್ಧರಿಸಿದ್ದು,ವಿದೇಶಗಳಲ್ಲಿಯ ತನ್ನ ರಾಯಭಾರಿ ಕಚೇರಿಗಳ ಮೂಲಕ ಆಮದಿಗೆ ಸಂಭಾವ್ಯ ಮೂಲಗಳನ್ನು ಅನ್ವೇಷಿಸುವಂತೆ ವಿದೇಶಾಂಗ ಸಚಿವಾಲಯಕ್ಕೆ ನಿರ್ದೇಶ ನೀಡಲಾಗಿದೆ.

1.42 ಕೋಟಿಗೂ ಅಧಿಕ ಕೋವಿಡ್-19 ಪ್ರಕರಣಗಳೊಂದಿಗೆ ಭಾರತವು ವಿಶ್ವದಲ್ಲಿ ಅಮೆರಿಕದ ನಂತರದ ಸ್ಥಾನದಲ್ಲಿದೆ. ದೇಶದಲ್ಲಿ ಎರಡನೇ ಅಲೆಯಿಂದಾಗಿ ರಾಜ್ಯಗಳು ಆಸ್ಪತ್ರೆ ಹಾಸಿಗೆಗಳು,ಆಮ್ಲಜನಕ,ಔಷಧಿಗಳು ಮತ್ತು ಲಸಿಕೆ ಡೋಸ್ಗಳ ಕೊರತೆಯನ್ನು ಎದುರಿಸುತ್ತಿವೆ. ಆಮ್ಲಜನಕ ಪೂರೈಕೆ,ರೆಮಿಡೆಸಿವಿರ್ ಮತ್ತು ಆಸ್ಪತ್ರೆ ಹಾಸಿಗೆಗಳ ಲಭ್ಯತೆಯನ್ನು ಕಂಡುಕೊಳ್ಳಲು ನೆರವಾಗುವಂತೆ ಕೋರಿ ಹಲವಾರು ರೋಗಿಗಳು ಮತ್ತು ಅವರ ಬಂಧುಗಳು ಸಾಮಾಜಿಕ ಜಾಲತಾಣ ವೇದಿಕೆಗಳ ಮೊರೆಹೋಗಿದ್ದಾರೆ.

ಅಧಿಕಾರಯುತ ತಂಡ 2 ಗುರುವಾರ ಸಭೆ ಸೇರಿ ಪರಿಸ್ಥಿತಿಯನ್ನು ಪುನರ್ಪರಿಶೀಲಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಿರುವ ಆರೋಗ್ಯ ಸಚಿವಾಲಯವು, ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್, ಉತ್ತರ ಪ್ರದೇಶ, ದಿಲ್ಲಿ, ಛತ್ತೀಸ್ಗಡ, ಕರ್ನಾಟಕ, ಕೇರಳ, ತಮಿಳುನಾಡು, ಪಂಜಾಬ್, ಹರ್ಯಾಣ ಮತ್ತು ರಾಜಸ್ಥಾನ ಸೇರಿದಂತೆ ಅಧಿಕ ಕೊರೋನವೈರಸ್ ಪ್ರಕರಣಗಳಿರುವ 12 ರಾಜ್ಯಗಳು ವೈದ್ಯಕೀಯ ಆಮ್ಲಜನಕದ ಪೂರೈಕೆಗಾಗಿ ವಿಶೇಷ ಬೇಡಿಕೆಯನ್ನು ಸಲ್ಲಿಸಿವೆ ಎಂದು ಹೇಳಿದೆ.

ಕೊರೋನವೈರಸ್ ರೋಗಿಗಳ ಚಿಕಿತ್ಸೆಯಲ್ಲಿ ವೈದ್ಯಕೀಯ ಆಮ್ಲಜನಕವು ನಿರ್ಣಾಯಕ ಪಾತ್ರವನ್ನು ಹೊಂದಿದೆ ಎಂದು ಅದು ತಿಳಿಸಿದೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News