15 ದಿನದೊಳಗೆ ರೆಮ್‌ಡೆಸಿವಿರ್ ಉತ್ಪಾದನೆ ದ್ವಿಗುಣ: ಕೇಂದ್ರ ಸರಕಾರ

Update: 2021-04-18 17:11 GMT

ಹೊಸದಿಲ್ಲಿ, ಎ.18: ಕೊರೋನ ಸೋಂಕಿತರಿಗೆ ಚಿಕಿತ್ಸೆ ನೀಡಲು ಹೆಚ್ಚಿನ ಬೇಡಿಕೆಯಿರುವ ವೈರಸ್ ನಿರೋಧಕ ಔಷಧ ರೆಮ್‌ಡೆಸಿವಿರ್‌ನ ಕೊರತೆಯಿದೆ ಎಂಬ ವರದಿಯ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆಯ ಸಚಿವ ಮನ್ಸುಖ್ ಮಾಂಡವೀಯ, ಮುಂದಿನ 15 ದಿನದಲ್ಲಿ ದುಪ್ಪಟ್ಟು ಪ್ರಮಾಣದಲ್ಲಿ ರೆಮ್‌ಡೆಸಿವಿರ್ ಉತ್ಪಾದನೆಯಾಗಲಿದೆ ಎಂದಿದ್ದಾರೆ.

ದೇಶದಲ್ಲಿ ರೆಮ್‌ಡೆಸಿವಿರ್ ಲಸಿಕೆಯ ಉತ್ಪಾದನೆ ಹೆಚ್ಚಿಸಲು ಮತ್ತು ಕಡಿಮೆ ಬೆಲೆಯಲ್ಲಿ ಲಭ್ಯವಾಗಿಸಲು ಕೇಂದ್ರ ಸರಕಾರ ಎಲ್ಲಾ ಪ್ರಯತ್ನ ನಡೆಸಿದೆ. ಈಗ ದಿನಂಪ್ರತಿ 1,50,000 ಶೀಷೆ(ಸಣ್ಣ ಬಾಟಲಿ) ಲಸಿಕೆ ಉತ್ಪಾದನೆಯಾಗುತ್ತಿದ್ದು ಮುಂದಿನ 15 ದಿನದಲ್ಲಿ 3,00,000 ಶೀಷೆಗೆ ಹೆಚ್ಚಲಿದೆ ಎಂದು ಮಾಂಡವೀಯ ಟ್ವೀಟ್ ಮಾಡಿದ್ದಾರೆ. ಈಗ 20 ಕಾರ್ಖಾನೆಗಳಲ್ಲಿ ರೆಮ್‌ಡೆಸಿವಿರ್ ಲಸಿಕೆ ಉತ್ಪಾದನೆಯಾಗುತ್ತಿದ್ದು ಹೆಚ್ಚುವರಿ 20 ಕಾರ್ಖಾನೆಗಳಿಗೆ ಅನುಮತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ದೇಶದಲ್ಲಿ ದಿನಂಪ್ರತಿ ಗರಿಷ್ಟ ಲಸಿಕೆ ಉತ್ಪಾದಿಸಲು ಪ್ರಯತ್ನಿಸಲಾಗುವುದು ಎಂದವರು ಹೇಳಿದ್ದಾರೆ. ಹಲವು ಔಷಧ ಉತ್ಪಾದನಾ ಸಂಸ್ಥೆಗಳು ರೆಮ್‌ಡೆಸಿವಿರ್ ಲಸಿಕೆಯ ಬೆಲೆಯನ್ನು 5,000 ರೂ.ಯಿಂದ 3,500 ರೂ.ಗೆ ಇಳಿಸಿದ್ದು ಇದರಿಂದ ರೋಗಿಗಳಿಗೆ ಬಹಳಷ್ಟು ಅನುಕೂಲವಾಗಿದೆ. ಆಸ್ಪತ್ರೆಗೆ ದಾಖಲಾಗಿರುವ ಕೊರೋನ ಸೋಂಕಿತರ ಚಿಕಿತ್ಸೆಯಲ್ಲಿ ರೆಮ್‌ಡೆಸಿವಿರ್ ಲಸಿಕೆ ಬಳಸಬಹುದು ಎಂದು ರಾಷ್ಟ್ರೀಯ ಚಿಕಿತ್ಸೆ ಶಿಷ್ಟಾಚಾರ ನಿಯಮಾವಳಿಯಲ್ಲಿ ಸೂಚಿಸಲಾಗಿದೆ.

ಕೇಂದ್ರ ಸರಕಾರ ಸುಮಾರು 7 ಲಕ್ಷ ಶೀಷೆಗಳನ್ನು ಕಳೆದ ಕೆಲ ದಿನಗಳಲ್ಲಿ ಹಲವು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಕ್ಕೆ ರವಾನಿಸಿದೆ. ಆದರೂ ಹಲವು ರಾಜ್ಯಗಳಲ್ಲಿ ರೆಮ್‌ಡೆಸಿವಿರ್‌ನ ಕೊರತೆಯಿರುವುದಾಗಿ ವರದಿಯಾಗಿದೆ. ಕೊರೋನ ಹಾಟ್‌ಸ್ಪಾಟ್ ಎಂದು ಗುರುತಿಸಿಕೊಂಡಿರುವ ಕೆಲವು ನಗರಗಳ ಔಷಧ ಅಂಗಡಿಯಲ್ಲಿ ರೆಮ್‌ಡೆಸಿವಿರ್‌ಗಾಗಿ ಸರತಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿಯಿದೆ. ದೇಶದಲ್ಲಿ ಅತ್ಯಧಿಕ ಸೋಂಕು ಪ್ರಕರಣ ದಾಖಲಾಗಿರುವ ಮಹಾರಾಷ್ಟ್ರದಲ್ಲಿ ರೆಮ್‌ಡೆಸಿವಿರ್ ಲಸಿಕೆಯ ತೀವ್ರ ಕೊರತೆಯಿದೆ ಎಂದು ರಾಜ್ಯ ಸರಕಾರ ಹೇಳಿದ್ದು, ವಿಪಕ್ಷಗಳ ಆಡಳಿತವಿರುವ ರಾಜ್ಯಗಳಿಗೆ ಲಸಿಕೆ ಪೂರೈಕೆಯಲ್ಲಿ ಕೇಂದ್ರ ಸರಕಾರ ತಾರತಮ್ಯ ಎಸಗುತ್ತಿದೆ ಎಂದು ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News