ವೈದ್ಯಕೀಯ ಆಮ್ಲಜನಕ ಕೊರತೆ: 20 ಕೋವಿಡ್ ರೋಗಿಗಳು ಮೃತ್ಯು
ಹೊಸದಿಲ್ಲಿ: ವೈದ್ಯಕೀಯ ಆಮ್ಲಜನಕದ ಕೊರತೆಯ ಕಾರಣದಿಂದಾಗಿ ದಿಲ್ಲಿಯ ಜೈಪುರ ಗೋಲ್ಡನ್ ಆಸ್ಪತ್ರೆಯಲ್ಲಿ ಕಳೆದ ರಾತ್ರಿ 20 ಕೋವಿಡ್ ರೋಗಿಗಳು ಮೃತಪಟ್ಟಿರುವುದಾಗಿ ಆಸ್ಪತ್ರೆಯ ಉನ್ನತ ಅಧಿಕಾರಿಗಳು ಇಂದು ತಿಳಿಸಿದ್ದಾರೆ. ಈ ಘಟನೆಯು ರಾಷ್ಟ್ರರಾಜಧಾನಿಯಲ್ಲಿ ಆಸ್ಪತ್ರೆಗಳ ಹದಗೆಟ್ಟಿರುವ ಸ್ಥಿತಿಗೆ ಸಾಕ್ಷಿಯಾಗಿದೆ.
“ ಸರಕಾರದಿಂದ 3.5 ಮೆಟ್ರಿಕ್ ಟನ್ ನಷ್ಟು ಆಕ್ಸಿಜನ್ ಪಡೆದಿದ್ದೇವೆ. ನಮಗೆ ಸಂಜೆ 5 ಗಂಟೆಗೆ ಆಕ್ಸಿಜನ್ ಸರಬರಾಜು ತಲುಪಬೇಕಾಗಿತ್ತು. ಆದರೆ ಅದು ತಲುಪುವಾಗ ಮಧ್ಯರಾತ್ರಿಯಾಗಿತ್ತು. ಈ ಸಮಯದಲ್ಲಿ 20ರೋಗಿಗಳು ಮೃತಪಟ್ಟಿದ್ದಾರೆ'' ಎಂದು ಜೈಪುರ ಗೋಲ್ಡನ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾಧಾ ಡಾ.ಡಿ.ಕೆ. ಬಲುಜಾ ತಿಳಿಸಿದ್ದಾರೆ.
"ಆಸ್ಪತ್ರೆಯಲ್ಲಿ ದಾಖಲಾಗಿರುವ ಕನಿಷ್ಠ 215 ಕೋವಿಡ್ ರೋಗಿಗಳ ಪರಿಸ್ಥಿತಿಯು ಗಂಭೀರವಾಗಿದೆ. ಎಲ್ಲರಿಗೂ ಆಕ್ಸಿಜನ್ ಅಗತ್ಯವಿದೆ''ಎಂದು ಡಾ.ಡಿ.ಕೆ. ಬಲುಜಾ ತಿಳಿಸಿದ್ದಾರೆ.
ಆಮ್ಲಜನಕ ಕೊರತೆಗೆ ಸಂಬಂಧಿಸಿ ಇಂದು ಬೆಳಗ್ಗೆ ಎಸ್ ಒಎಸ್ ಕಳುಹಿಸಿರುವ ನಗರದ ಎರಡನೇ ಆಸ್ಪತ್ರೆ ಜೈಪುರ ಗೋಲ್ಡನ್ ಹಾಸ್ಪಿಟಲ್.
ಈ ಮೊದಲು ಮೂಲ್ ಚಂದ್ ಆಸ್ಪತ್ರೆ ಟ್ವೀಟ್ ಮಾಡಿ, 130ಕ್ಕೂ ಅಧಿಕ ಕೋವಿಡ್ ರೋಗಿಗಳಿಗೆ ತುರ್ತಾಗಿ ಆಕ್ಸಿಜನ್ ಒದಗಿಸಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಲೆ.ಗವರ್ನರ್ ಬೈಜಾಲ್‍ಗೆ ಮನವಿ ಮಾಡಿದ್ದಾರೆ.