×
Ad

ಐಪಿಎಲ್ ವೇತನದ ಒಂದು ಭಾಗವನ್ನು‌ ಭಾರತದ ಕೋವಿಡ್ ಪರಿಹಾರಕ್ಕಾಗಿ ನೀಡುತ್ತೇನೆ: ವಿಂಡೀಸ್ ಆಟಗಾರ ನಿಕೋಲಾಸ್ ಪೂರನ್

Update: 2021-04-30 17:28 IST

ಹೊಸದಿಲ್ಲಿ: ಐಪಿಎಲ್ ತಂಡ ಪಂಜಾಬ್ ಕಿಂಗ್ಸ್ ನ ಬ್ಯಾಟ್ಸ್ ಮ್ಯಾನ್ ನಿಕೋಲಾಸ್ ಪೂರನ್ ಅವರು  ಭಾರತದ ಕೋವಿಡ್-19 ವಿರುದ್ಧದ ಹೋರಾಟಕ್ಕೆ ತಮ್ಮ ಐಪಿಎಲ್ ವೇತನದ ಒಂದು ಭಾಗ ದೇಣಿಗೆ ನೀಡುವುದಾಗಿ ಹೇಳಿದ್ದಾರೆ.

ಈ  ಕುರಿತಂತೆ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪೋಸ್ಟ್ ಮಾಡಿರುವ ವೀಡಿಯೋದಲ್ಲಿ 25 ವರ್ಷದ ಈ ವೆಸ್ಟ್ ಇಂಡೀಸ್ ಆಟಗಾರ ಹೇಳಿದ್ದಾರಲ್ಲದೆ ತಮ್ಮ ಸಹ ಆಟಗಾರರಿಗೂ ಈ ಉದ್ದೇಶಕ್ಕೆ ಕೊಡುಗೆ ನೀಡುವಂತೆ ಕೋರಿದ್ದಾರೆ.

"ಇತರ ದೇಶಗಳೂ ಈ ಸಾಂಕ್ರಾಮಿಕದಿಂದ ಈಗಲೂ ಬಾಧಿತವಾಗಿದ್ದರೂ ಭಾರತದಲ್ಲಿನ ಈಗಿನ ಪರಿಸ್ಥಿತಿ ಬಹಳ ಚಿಂತಾಜನಕವಾಗಿದೆ. ಇಂತಹ ಒಂದು ಗಂಭೀರ ಸ್ಥಿತಿಯಲ್ಲಿ ಜಾಗೃತಿ ಮೂಡಿಸಲು ಹಾಗೂ ಆರ್ಥಿಕ ಸಹಾಯ ಮಾಡಲು ನನ್ನಿಂದಾದಷ್ಟು  ಮಾಡುತ್ತೇನೆ.   ಜನರಿಗೆ ಆಕ್ಸಿಜನ್ ಮತ್ತಿತರ ಅಗತ್ಯತೆಗಳು ದೊರೆಯದೆ ಬಹಳ ಕಷ್ಟವಾಗಿದೆ. ಭಾರತಕ್ಕಾಗಿ ನಾನು ಸದಾ ಪ್ರಾರ್ಥಿಸುತ್ತೇನೆ ಹಾಗೂ ನನ್ನ ಐಪಿಎಲ್ ವೇತನದ ಒಂದು ಭಾಗವನ್ನು ದೇಣಿಗೆ ನೀಡುತ್ತೇನೆ" ಎಂದು ಒಂದು ನಿಮಿಷ ಅವಧಿಯ ವೀಡಿಯೋದಲ್ಲಿ ಅವರು ಹೇಳಿದ್ದಾರೆ.

ನಿಕೋಲಾಸ್ ಅವರ ಪೋಸ್ಟ್ ಹೊರಬರುತ್ತಿದ್ದಂತೆಯೇ ಪಂಜಾಬ್ ಕಿಂಗ್ಸ್ ಕೂಡ ಆಕ್ಸಿಜನ್ ಕಾನ್ಸಂಟ್ರೇಟರುಗಳನ್ನು ನೀಡುವುದಾಗಿ ಹೇಳಿದೆ. ರಾಜಸ್ಥಾನ್ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೂಡ ಕೋವಿಡ್ ಪರಿಹಾರಕ್ಕಾಗಿ ಕ್ರಮವಾಗಿ ರೂ 7.5 ಕೋಟಿ ಹಾಗೂ ರೂ 1.50 ಕೋಟಿ ನೀಡುವುದಾಗಿ ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News