×
Ad

ಬಟ್ಲರ್ ಭರ್ಜರಿ ಶತಕ, ಹೈದರಾಬಾದ್ ವಿರುದ್ಧ ರಾಯಲ್ಸ್ ದರ್ಬಾರ್

Update: 2021-05-02 20:01 IST

 ಹೊಸದಿಲ್ಲಿ: ಜೋಸ್ ಬಟ್ಲರ್ ಆಕರ್ಷಕ ಶತಕ ಹಾಗೂ ಮುಸ್ತಫಿಝರ್ರಹ್ಮಾನ್ (3-20) ಹಾಗೂ ಕ್ರಿಸ್ ಮೊರಿಸ್(3-29) ಅವರ ಅತ್ಯುತ್ತಮ ಬೌಲಿಂಗ್ ನೆರವಿನಿಂದ ರಾಜಸ್ಥಾನ ರಾಯಲ್ಸ್ ತಂಡ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಐಪಿಎಲ್‌ನ 28ನೇ ಪಂದ್ಯವನ್ನು 55 ರನ್ ಗಳ ಅಂತರದಿಂದ ಭರ್ಜರಿಯಾಗಿ ಗೆದ್ದುಕೊಂಡಿದೆ.

ರವಿವಾರ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ರಾಜಸ್ಥಾನ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 220 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಹೈದರಾಬಾದ್ ಸನ್‌ರೈಸರ್ಸ್ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತು. ಮನೀಷ್ ಪಾಂಡೆ(31)ಸರ್ವಾಧಿಕ ಸ್ಕೋರ್ ಗಳಿಸಿದರು. ಜಾನಿ ಬೈರ್‌ಸ್ಟೋವ್(30), ನಾಯಕ ಕೇನ್ ವಿಲಿಯಮ್ಸನ್(20), ಕೇದಾರ್ ಜಾಧವ್(19), ಮುಹಮ್ಮದ್ ನಬಿ(17) ಹಾಗೂ ಭುವನೇಶ್ವರ ಕುಮಾರ್(ಔಟಾಗದೆ 14)ಎರಡಂಕೆಯ ಸ್ಕೋರ್ ಗಳಿಸಿದರು.

ಇನಿಂಗ್ಸ್ ಆರಂಭಿಸಿದ ಮನೀಷ್ ಪಾಂಡೆ ಹಾಗೂ ಬೈರ್‌ಸ್ಟೋವ್ ಮೊದಲ ವಿಕೆಟ್‌ಗೆ 57 ರನ್ ಗಳಿಸಿ ಉತ್ತಮ ಆರಂಭ ಒದಗಿಸಿದರು. ಆದರೆ ಭದ್ರ ಬುನಾದಿಯ ಹೊರತಾಗಿಯೂ ಹೈದರಾಬಾದ್ ಕಠಿಣ ಸವಾಲು ಬೆನ್ನಟ್ಟುವಲ್ಲಿ ಎಡವಿತು. ಮುಸ್ತಫಿಝರ್ರಹ್ಮಾನ್ ಹಾಗೂ ಮೊರಿಸ್ ಜೋಡಿ ವಿಲಿಯಮ್ಸನ್ ಬಳಗವನ್ನು ಕಟ್ಟಿಹಾಕಿತು.

ಹೈದರಾಬಾದ್ 7ನೇ ಪಂದ್ಯದಲ್ಲಿ ಆರನೇ ಸೋಲು ಅನುಭವಿಸಿ ಟೂರ್ನಿಯಲ್ಲಿ ತನ್ನಕಳಪೆ ಪ್ರದರ್ಶನ ಮುಂದುವರಿಸಿತು. ರಾಜಸ್ಥಾನ ತಂಡ ತಾನಾಡಿದ 7ನೇ ಪಂದ್ಯದಲ್ಲಿ 3ನೇ ಗೆಲುವು ತನ್ನದಾಗಿಸಿಕೊಂಡಿತು.
ಯಶಸ್ವಿ ಜೈಸ್ವಾಲ್(12)ಅವರೊಂದಿಗೆ ಇನಿಂಗ್ಸ್ ಆರಂಭಿಸಿದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಬಟ್ಲರ್ ಮೊದಲ ವಿಕೆಟಿಗೆ ಕೇವಲ 17 ರನ್ ಸೇರಿಸಿದರು. ಜೈಸ್ವಾಲ್ 12 ರನ್ ಗಳಿಸಿ ರಶೀದ್ ಖಾನ್ ಬೀಸಿದ ಎಲ್ಬಿಡಬ್ಲು ಬಲೆಗೆ ಬಿದ್ದರು.

ಜೈಸ್ವಾಲ್ ಔಟಾದ ನಂತರ ನಾಯಕ ಸಂಜು ಸ್ಯಾಮ್ಸನ್(48, 33 ಎಸೆತ, 4 ಬೌಂಡರಿ, 2 ಸಿಕ್ಸರ್)ಅವರೊಂದಿಗೆ ಎರಡನೇ ವಿಕೆಟ್‌ಗೆ 150 ರನ್ ಜೊತೆಯಾಟ ನಡೆಸಿದ ಬಟ್ಲರ್ ರಾಜಸ್ಥಾನಕ್ಕೆ ಆಸರೆಯಾದರು. ರಿಯಾನ್ ಪರಾಗ್(ಔಟಾಗದೆ 15)ಅವರೊಂದಿಗೆ ಕೇವಲ 16 ಎಸೆತಗಳಲ್ಲಿ ಮೂರನೇ ವಿಕೆಟ್‌ಗೆ 42 ರನ್ ಜೊತೆಯಾಟ ನಡೆಸಿದರು.

30 ಎಸೆತಗಳಲ್ಲಿ 32 ರನ್ ಗಳಿಸಿದ್ದ ಬಟ್ಲರ್ ಸಿಕ್ಸರ್ ಸಿಡಿಸಿ 39 ಎಸೆತಗಳಲ್ಲಿ ಅರ್ಧಶತಕ ತಲುಪಿದರು.
50 ರನ್ ಗಳಿಸಿದ ಬಳಿಕ ಬಿಗ್ ಹಿಟ್ಟರ್ ಬಟ್ಲರ್ ಹೈದರಾಬಾದ್ ಬೌಲರ್‌ಗಳ ಎಸೆತವನ್ನು ಬೌಂಡರಿ ಹಾಗೂ ಸಿಕ್ಸರ್‌ಗಳತ್ತ ಅಟ್ಟಿದರು. ಖಲೀಲ್ ಅಹ್ಮದ್ ಅವರು ಎಸೆದಿದ್ದ 15ನೇ ಓವರ್‌ನಲ್ಲಿ ತಲಾ ಎರಡು ಸಿಕ್ಸರ್ ಹಾಗೂ ಬೌಂಡರಿ ಸಿಡಿಸಿದರು. ಮುಂದಿನ ಓವರ್‌ನಲ್ಲಿ ಹಿರಿಯ ಬೌಲರ್ ಭುವನೇಶ್ವರ ಕುಮಾರ್ ಅವರನ್ನು ಗುರಿಯಾಗಿಸಿ ಬ್ಯಾಟ್ ಬೀಸಿ 90ರ ಗಡಿ ತಲುಪಿದರು.

ವಿಜಯ ಶಂಕರ್ ಎಸೆದ 17ನೇ ಓವರ್‌ನಲ್ಲಿ 2 ಬೌಂಡರಿ ಹಾಗೂ ಒಂಟಿ ರನ್ ಗಳಿಸಿದ ಬಟ್ಲರ್ ಟ್ವೆಂಟಿ-20 ಮಾದರಿಯ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಸಿಡಿಸಿದರು.

ರಾಜಸ್ಥಾನ ರಾಯಲ್ಸ್ ಇನಿಂಗ್ಸ್‌ನ 19ನೇ ಓವರ್‌ನಲ್ಲಿ ಮೊದಲ 5 ಎಸೆತಗಳಲ್ಲಿ ಬಟ್ಲರ್ ಅವರು 3 ಸಿಕ್ಸರ್ ಹಾಗೂ 1 ಬೌಂಡರಿ ಗಳಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಸಂದೀಪ್ ಶರ್ಮಾ ಅವರು ಬಟ್ಲರ್ ಅವರ ಬಿರುಗಾಳಿಯ ಇನಿಂಗ್ಸ್‌ಗೆ(124, 64 ಎಸೆತ)ತೆರೆ ಎಳೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News