​ಬ್ರಿಟನ್‌ನಿಂದ 3 ಆಮ್ಲಜನಕ ಘಟಕ ಹೊತ್ತ ವಿಶ್ವದ ಅತಿದೊಡ್ಡ ಕಾರ್ಗೊ ವಿಮಾನ ಭಾರತಕ್ಕೆ

Update: 2021-05-08 03:59 GMT

ಲಂಡನ್: ಕೋವಿಡ್-19 ಎರಡನೇ ಅಲೆಯಿಂದ ತತ್ತರಿಸಿರುವ ಭಾರತಕ್ಕೆ ನೆರವಿನ ಹಸ್ತ ಚಾಚಿರುವ ಬ್ರಿಟನ್, 18 ಟನ್ ಸಾಮರ್ಥ್ಯದ ಮೂರು ಆಮ್ಲಜನಕ ಜನರೇಟರ್‌ಗಳು ಮತ್ತು 1000 ವೆಂಟಿಲೇಟರ್‌ಗಳನ್ನು ಹೊತ್ತ ವಿಶ್ವದ ಅತಿದೊಡ್ಡ ಕಾರ್ಗೊ ವಿಮಾನವನ್ನು ಉತ್ತರ ಐರ್ಲೆಂಡಿನ ಬೆಲ್‌ಫಸ್ಟ್‌ನಿಂದ ಭಾರತಕ್ಕೆ ಕಳುಹಿಸಿಕೊಟ್ಟಿದೆ.

ವಿದೇಶಾಂಗ, ಕಾಮನ್ವೆಲ್ತ್ ಮತ್ತು ಅಭಿವೃದ್ಧಿ ಕಚೇರಿ (ಎಫ್‌ಸಿಡಿಓ) ಈ ಪರಿಹಾರ ಸಾಮಗ್ರಿಗಳಿಗೆ ನೆರವು ನೀಡಿದ್ದು, ಈ ಜೀವ ರಕ್ಷಕ ಕಿಟ್‌ಗಳನ್ನು ದೈತ್ಯ ಅಂಟನೋವ್ 124 ವಿಮಾನಕ್ಕೆ ಲೋಡ್ ಮಾಡಲು ವಿಮಾನ ನಿಲ್ದಾಣ ಸಿಬ್ಬಂದಿ ರಾತ್ರಿಯಿಡೀ ಶ್ರಮಿಸಿದರು. ರವಿವಾರ ಮುಂಜಾನೆ ಎಂಟು ಗಂಟೆ ವೇಳೆಗೆ ಇದು ದೆಹಲಿ ತಲುಪುವ ನಿರೀಕ್ಷೆ ಇದೆ. ಇವುಗಳನ್ನು ಆಸ್ಪತ್ರೆಗಳಿಗೆ ತಲುಪಿಸುವ ಕಾರ್ಯವನ್ನು ಭಾರತೀಯ ರೆಡ್‌ಕ್ರಾಸ್ ನಿರ್ವಹಿಸಲಿದೆ.

40 ಅಡಿ ಸರಕು ಸಾಗಾಣಿಕೆ ಕಂಟೈನರ್ ಗಾತ್ರದ 40 ಅಡಿಯ ಪ್ರತಿ ಆಮ್ಲಜನಕ ಜನರೇಟರ್‌ಗಳು ಪ್ರತಿ ನಿಮಿಷಕ್ಕೆ 500 ಲೀಟರ್ ಆಮ್ಲಜನಕವನ್ನು ಉತ್ಪಾದಿಸಲಿದ್ದು, ಒಂದು ಬಾರಿಗೆ 50 ಮಂದಿಗೆ ಆಮ್ಲಜನಕ ನೀಡಲು ಇದು ಸಾಕಾಗುತ್ತದೆ.

"ಇನ್ನಷ್ಟು ಹೆಚ್ಚಿನ ಆಮ್ಲಜನಕ ಜನರೇಟರ್‌ಗಳನ್ನು ಉತ್ತರ ಐರ್ಲೆಂಡ್‌ನಿಂದ ಭಾರತಕ್ಕೆ ಕಳುಹಿಸಲಾಗುತ್ತಿದೆ. ಈ ಜೀವರಕ್ಷಕ ಸಾಧನವು ದಯನೀಯ ಸ್ಥಿತಿಯಲ್ಲಿರುವ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಆಸ್ಪತ್ರೆಗಳಿಗೆ ನೆರವಾಗಲಿದೆ" ಎಂದು ಬ್ರಿಟನ್‌ನ ವಿದೇಶಾಂಗ ಕಾರ್ಯದರ್ಶಿ ಡೊಮಿನಿಕ್ ರಾಬ್ ಹೇಳಿದ್ದಾರೆ.

ಭಾರತದಲ್ಲಿ ಕೋವಿಡ್ ಸೋಂಕು ನಿಭಾಯಿಸಲು ಉಭಯ ದೇಶಗಳು ಜತೆಯಾಗಿ ಕಾರ್ಯ ನಿರ್ವಹಿಸಲಿವೆ. ನಾವೆಲ್ಲರೂ ಸುರಕ್ಷಿತವಾಗಿರುವ ವರೆಗೆ ಯಾರೂ ಸುರಕ್ಷಿತವಲ್ಲ" ಎಂದು ಅವರು ಹೇಳಿದರು.

ಭಾರತಕ್ಕೆ 495 ಆಮ್ಲಜನಕ ಉತ್ಪಾದಕ ತಂತ್ರಗಳನ್ನು ಮತ್ತು 200 ವೆಂಟಿಲೇಟರ್‌ಗಳನ್ನು ಪೂರೈಸುವುದಾಗಿ ಕಳೆದ ತಿಂಗಳು ಬ್ರಿಟನ್ ಭರವಸೆ ನೀಡಿದ್ದು, ಎಫ್‌ಸಿಡಿಓ ಇದಕ್ಕೆ ಹಣಕಾಸು ನೆರವು ನೀಡುತ್ತಿದೆ. ಉತ್ತರ ಐರ್ಲೆಂಡ್‌ನ ಆರೋಗ್ಯ ಸೇವಾ ಇಲಾಖೆ ಹಾಗೂ ಆರೋಗ್ಯ ಮತ್ತು ಸಾಮಾಜಿಕ ಕಾಳಜಿ ವಿಭಾಗದಿಂದ ಈ ನೆರವಿನ ಪ್ಯಾಕೇಜ್ ಭಾರತಕ್ಕೆ ರವಾನೆಯಾಗಲಿದ್ದು, ಇದರ ಹೊರತಾಗಿ ಡಿಎಚ್‌ಎಸ್‌ಸಿ 1000 ವೆಂಟಿಲೇಟರ್‌ಗಳನ್ನು ಪೂರೈಸುವ ಆಶ್ವಾಸನೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News