ಮಾಸ್ಕೊ ಒಲಿಂಪಿಕ್ಸ್ ಪದಕ ವಿಜೇತ, ಮಾಜಿ ಹಾಕಿ ಕೋಚ್ ಎಂ.ಕೆ.ಕೌಶಿಕ್ ಕೋವಿಡ್ ನಿಂದ ನಿಧನ

Update: 2021-05-08 15:24 GMT

ಹೊಸದಿಲ್ಲಿ:ಕಳೆದ ಮೂರು ವಾರಗಳಿಂದ ಕೋವಿಡ್-19 ವಿರುದ್ಧ ಹೋರಾಡುತ್ತಿದ್ದ ಭಾರತದ ಮಾಜಿ ಹಾಕಿ ಆಟಗಾರ ಹಾಗೂ ಕೋಚ್ ಎಂ.ಕೆ. ಕೌಶಿಕ್ ಅವರು ಶನಿವಾರ ಮೃತಪಟ್ಟಿದ್ದಾರೆ.

ಕೌಶಿಕ್ ಅವರಿಗೆ 66 ವರ್ಷ ವಯಸ್ಸಾಗಿತ್ತು. ಅವರು ಪುತ್ರ ಹಾಗೂ ಪತ್ನಿಯನ್ನು ಅಗಲಿದ್ದಾರೆ.

ಕೌಶಿಕ್ ಅವರು 1980ರ ಮಾಸ್ಕೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ  ಭಾರತ ತಂಡದ ಸದಸ್ಯರಾಗಿದ್ದರು. ಎಪ್ರಿಲ್ 19ರಂದು ಕೋವಿಡ್-19 ಸೋಂಕಿಗೆ ಒಳಗಾಗಿದ್ದರು. ದಿಲ್ಲಿಯ ನರ್ಸಿಂಗ್ ಹೋಮ್ ನಲ್ಲಿ ದಾಖಲಾಗಿದ್ದರು.

ಕೌಶಿಕ್ ಅವರನ್ನು ಇಂದು ಬೆಳಗ್ಗೆ ವೆಂಟಿಲೇಟರ್ ಗೆ ಸ್ಥಳಾಂತರಿಸಲಾಗಿತ್ತು ಆದರೆ ಅವರು ಶನಿವಾರ ನಿಧನರಾಗಿದ್ದಾರೆ ಎಂದು ಕೌಶಿಕ್ ಪುತ್ರ ಎಹ್ಸಾನ್ ಪಿಟಿಐಗೆ ತಿಳಿಸಿದ್ದಾರೆ.

ಕೌಶಿಕ್ ಅವರು ಸೀನಿಯರ್ ಪುರುಷರ ತಂಡ ಹಾಗೂ ಮಹಿಳಾ ತಂಡಗಳಿಗೆ ತರಬೇತಿ ನೀಡಿದ್ದರು.  ಇವರ ತರಬೇತಿಯಡಿ ಭಾರತದ ಪುರುಷರ ತಂಡವು 1998ರ ಏಶ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಜಯಿಸಿತ್ತು. ಭಾರತೀಯ ಮಹಿಳಾ ತಂಡವು 2006ರಲ್ಲಿ ಕೌಶಿಕ್ ಕೋಚಿಂಗ್ ನಲ್ಲಿ ದೋಹಾದಲ್ಲಿ ನಡೆದ ಏಶ್ಯನ್ ಗೇಮ್ಸ್ ನಲ್ಲಿ ಕಂಚಿನ ಪದಕ ಜಯಿಸಿತ್ತು.

1998ರಲ್ಲಿ ಅರ್ಜುನ ಪ್ರಶಸ್ತಿ ಹಾಗೂ 2002ರಲ್ಲಿ ದ್ರೋಣಾಚಾರ್ಯ  ಪ್ರಶಸ್ತಿಗೆ ಭಾಜನರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News