ದಿಶಾ ರವಿ ಪ್ರಕರಣದಲ್ಲಿ ಉತ್ತರ ನೀಡದ ಕೇಂದ್ರ ಸರಕಾರಕ್ಕೆ ಹೈಕೋರ್ಟ್ ತರಾಟೆ

Update: 2021-05-18 08:47 GMT
(Photo Courtesy: Social Media)

ಹೊಸದಿಲ್ಲಿ: 'ಟೂಲ್ ಕಿಟ್' ಪ್ರಕರಣದಲ್ಲಿ ತನ್ನ ವಿರುದ್ಧ ದಾಖಲಾದ ಎಫ್ಐಆರ್ ಗೆ ಸಂಬಂಧಿಸಿದಂತೆ ಯಾವುದೇ ತನಿಖಾ ಸಾಮಗ್ರಿಗಳು ಮಾಧ್ಯಮಗಳಿಗೆ ಸೋರಿಕೆಯಾಗದಂತೆ ಪೊಲೀಸರನ್ನು ತಡೆಯಬೇಕೆಂದು ಕೋರಿ 22 ವರ್ಷದ ಬೆಂಗಳೂರು ನಿವಾಸಿ ಹಾಗೂ ಹವಾಮಾನ ಕಾರ್ಯಕರ್ತೆ ದಿಶಾ ರವಿ ಸಲ್ಲಿಸಿದ್ದ ಮನವಿಗೆ ತನ್ನ ಪ್ರತಿಕ್ರಿಯೆ ನೀಡುವಲ್ಲಿ ಕೇಂದ್ರ ಸರಕಾರ ವಿಫಲವಾಗಿದೆ ಎಂದು ದಿಲ್ಲಿ ಹೈಕೋರ್ಟ್  ಮಂಗಳವಾರ ಹೇಳಿದೆ.

ಪ್ರತಿ ಅಫಿಡವಿಟ್ ಸಲ್ಲಿಸಲು ಕೇಂದ್ರ ಸರಕಾರಕ್ಕೆ ನ್ಯಾಯಾಲಯವು ಮಾರ್ಚ್ ನಲ್ಲಿ ಕೊನೆಯ ಅವಕಾಶವನ್ನು ನೀಡಿತ್ತು.

ಕೇಂದ್ರ ಸರಕಾರದ ಸಲಹೆಗಾರರನ್ನು ಉದ್ದೇಶಿಸಿ ಮಾತನಾಡಿದ ನ್ಯಾಯಮೂರ್ತಿ ರೇಖಾ ಪಲ್ಲಿ, “ಕೊನೆಯ ಅವಕಾಶದ ಅರ್ಥವೇನು? ನಾನು ನಿಮ್ಮ ಮೇಲೆ ವೆಚ್ಚವನ್ನು ವಿಧಿಸಬೇಕೇ? ಕೊನೆಯ ಹಾಗೂ ಅಂತಿಮ ಅವಕಾಶದ ಪಾವಿತ್ರ್ಯತೆ ಏನು?"  ಎಂದು ಪ್ರಶ್ನಿಸಿದರು.

ಕೋವಿಡ್ -19 ಪ್ರಕರಣಗಳ ಉಲ್ಬಣವು ತನ್ನ ಉತ್ತರವನ್ನು ಸಲ್ಲಿಸುವಲ್ಲಿ ವಿಳಂಬಕ್ಕೆ ಒಂದು ಕಾರಣವೆಂದು ಕೇಂದ್ರ ಉಲ್ಲೇಖಿಸಿದೆ. ಪ್ರಕರಣವನ್ನು ಆಗಸ್ಟ್ ಗೆ ಮುಂದೂಡಿದ ನ್ಯಾಯಾಲಯವು ನಾಲ್ಕು ವಾರಗಳಲ್ಲಿ ಉತ್ತರವನ್ನು ಸಲ್ಲಿಸುವಂತೆ ಸರಕಾರವನ್ನು ಕೇಳಿದೆ.

ರೈತರ ಪ್ರತಿಭಟನೆಗೆ ಸಂಬಂಧಿಸಿ ಸ್ವೀಡಿಷ್ ಪರಿಸರ ಕಾರ್ಯಕರ್ತೆ ಗ್ರೆಟಾ ಥನ್‌ಬರ್ಗ್ ಟ್ವೀಟ್ ಮಾಡಿರುವ "ಟೂಲ್ ಕಿಟ್" ಹಂಚಿಕೊಂಡ ಆರೋಪದಲ್ಲಿ ದಿಶಾ ರವಿ ಅವರನ್ನು ಫೆಬ್ರವರಿ 13 ರಂದು ದಿಲ್ಲಿ ಪೊಲೀಸರು ಬಂಧಿಸಿದ್ದರು ಹಾಗೂ  ಫೆಬ್ರವರಿ 19 ರಂದು ದಿಲ್ಲಿ ವಿಚಾರಣಾ ನ್ಯಾಯಾಲಯ ಜಾಮೀನು ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News