ಲಕ್ನೊ: ಆರೋಗ್ಯದ ಹಕ್ಕಿಗೆ ಅಭಿಯಾನ ನಡೆಸುತ್ತಿದ್ದ ಕಾರ್ಯಕರ್ತರ ಮೇಲೆ ಗುಂಪಿನಿಂದ ದಾಳಿ

Update: 2021-05-18 18:13 GMT
photo: thewire.in 

ಲಕ್ನೊ, ಮೇ 18: ಸಾರ್ವಜನಿಕರಿಗೆ ಆರೋಗ್ಯದ ಹಕ್ಕು ಆಗ್ರಹಿಸಿ ಅಭಿಯಾನ ನಡೆಸುತ್ತಿದ್ದ ಸಾಮಾಜಿಕ ಹೋರಾಟಗಾರರ ಗುಂಪೊಂದರ ಮೇಲೆ ಲಕ್ನೊದಲ್ಲಿ ಸಂಘ ಪರಿವಾರದ ಬೆಂಬಲಿಗರೆನ್ನಲಾದ ಗುಂಪೊಂದು ಸೋಮವಾರ ದಾಳಿ ನಡೆಸಿದ್ದಾರೆಂದು thewire.in ವರದಿ ಮಾಡಿದೆ.

ಆರೋಗ್ಯ ಸೇವೆಗಳ ರಾಷ್ಟ್ರೀಕರಣವಾಗಬೇಕು ಹಾಗೂ ಲಾಕ್‌ಡೌನ್ ಸಮಯದಲ್ಲಿ ಬಡವರಿಗೆ ಆಹಾರ ಹಾಗೂ ಆಶ್ರಯವನ್ನು ಒದಗಿಸಬೇಕೆಂದು ಆಗ್ರಹಿಸಿ ‘ನವಜವಾನ್ ಭಾರತ್ ಸಭಾ ಹಾಗೂ ಸ್ತ್ರೀ ಮುಕ್ತಿ ಲೀಗ್ ಸಂಘಟನೆಗಳು ಜಂಟಿಯಾಗಿ ಉತ್ತರಪ್ರದೇಶಾದ್ಯಂತ ಸಾರ್ವಜನಿಕರಿಗೆ ಆರೋಗ್ಯದ ಹಕ್ಕು ಅಭಿಯಾನವನ್ನು ಆರಂಭಿಸಿದ್ದವು.

ಸೋಮವಾರ ಬೆಳಗ್ಗೆ ಸಾಮಾಜಿಕ ಕಾರ್ಯಕರ್ತರಾದ ಅನುಪಮ್, ಅವಿನಾಶ್ ಹಾಗೂ ರೂಪಾ ಎಂಬವರು ಹಸನ್‌ಗಂಜ್ ಪ್ರದೇಶದಲ್ಲಿ ಪೋಸ್ಟರ್‌ಗಳನ್ನು ಹಚ್ಚುತ್ತಿದ್ದರು ಹಾಗೂ ಕರಪತ್ರಗಳನ್ನು ವಿತರಿಸುತ್ತಿದ್ದರು. ಈ ಸಂದರ್ಭದಲ್ಲಿ ಕೆಲವು ಸ್ಥಳೀಯರು ಅವರನ್ನು ತಡೆಯಲು ಯತ್ನಿಸಿದರು. ಸಾಮಾಜಿಕ ಕಾರ್ಯಕರ್ತರು ಸಾರ್ವಜನಿಕರನ್ನು ತಪ್ಪುದಾರಿಗೆಳೆಯುತ್ತಿದ್ದಾರೆ ಎಂದು ನಿಂದಿಸಿದರಲ್ಲದೆ, ದೇವಾಲಯದ ಬಳಿ ಮುಸ್ಲಿಮರ ಪರ ಘೋಷಣೆಗಳುಳ್ಳ ಭಿತ್ತಿಪತ್ರಗಳನ್ನು ಹಚ್ಚುತ್ತಿದ್ದಾರೆಂದು ಆಪಾದಿಸಿದ್ದರು

ಆದರೆ ಈ ಅಭಿಯಾನದ ಉದ್ದೇಶವನ್ನು ಕಾರ್ಯಕರ್ತರು ಗುಂಪಿಗೆ ಮನವರಿಕೆ ಮಾಡಿಕೊಡಲು ಯತ್ನಿಸಿದರೂ ಅವರು ಕಿವಿಗೊಡಲಿಲ್ಲ. ಕಾರ್ಯಕರ್ತರನ್ನು ನಗರ ನಕ್ಸಲರೆಂದು ಆರೋಪಿಸಿದರು ಮತ್ತು ಅವರನ್ನು ಥಳಿಸತೊಡಗಿದರು. ದುಷ್ಕರ್ಮಿಯೊಬ್ಬ ತನ್ನ ಕೈಗಳನ್ನು ತಿರುಚಿದ್ದಲ್ಲದೆ, ಅಸಭ್ಯ ಪದಗಳನ್ನು ಬಳಸಿದನೆಂದು ಆಕ್ರಮಣಕ್ಕೊಳಗಾದ ಮಹಿಳಾ ಕಾರ್ಯಕರ್ತೆಯೊಬ್ಬರು ಆಪಾದಿಸಿದ್ದಾರೆ.

ಇದೇ ವೇಳೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಎಲ್ಲಾ ಮೂವರು ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಂಡರು. ಈ ಮಧ್ಯೆ ಸಾಮಾಜಿಕ ಕಾರ್ಯಕರ್ತರನ್ನು ಬಿಡುಗಡೆಗೆ ಆಗ್ರಹಿಸಿ ಎಡಪಂಥೀಯ ಬೆಂಬಲಿಗರ ಗುಂಪೊಂದು ಧರಣಿ ನಡೆಸಿತು.

ಕಾರ್ಯಕರ್ತರನ್ನು ಹಸನ್‌ಗಂಜ್ ಠಾಣೆಗೆ ಕರೆದೊಯ್ದ ಪೊಲೀಸರು ಅವರನ್ನು ಮೂರು ತಾಸುಗಳ ಕಾಲ ವಿಚಾರಣೆ ನಡೆಸಿದ್ದರು. ಆನಂತರ ಕೆಲವು ನ್ಯಾಯವಾದಿಗಳು ಸಾಮಾಜಿಕ ಕಾರ್ಯಕರ್ತರಿಗೆ ಬಲವಾದ ಬೆಂಬಲ ವ್ಯಕ್ತಪಡಿಸಿದ ಬಳಿಕ ಪೊಲೀಸರು ಅವರನ್ನು ಬಿಡುಗಡೆಗೊಳಿಸಿದರು. ಲಾಕ್‌ಡೌನ್ ನಿಯಮಾವಳಿಗಳನ್ನು ಉಲ್ಲಂಘಿಸಿದ ಹಾಗೂ ಕಾನೂನುಬಾಹಿರವಾಗಿ ಪೋಸ್ಟರ್‌ಗಳನ್ನು ಹಂಚಿದ ಆರೋಪದಲ್ಲಿ ಸಾಮಾಜಿಕ ಕಾರ್ಯಕರ್ತರನ್ನು ಬಂಧಿಸಲಾಗಿತ್ತೆಂದು ಹಸನ್‌ಗಂಜ್ ಪೊಲೀಸ್‌ಠಾಣಾಧಿಕಾರಿ ಯಶ್‌ಕಾಂತ್ ಸಿಂಗ್ ತಿಳಿಸಿದರು. ಸಾಮಾಜಿಕ ಕಾರ್ಯಕರ್ತರ ಮೇಲೆ ಗುಂಪಿನಿಂದ ಹಲ್ಲೆ ನಡೆದಿರುವುದನ್ನು ಕೂಡಾ ಅವರು ನಿರಾಕರಿಸಿದ್ದಾರೆ.

ದೇಶದಲ್ಲಾಗಲಿ, ರಾಜ್ಯದಲ್ಲಾಗಲಿ ಎಲ್ಲವೂ ಚೆನ್ನಾಗಿದೆ. ಯಾವುದಕ್ಕೂ ಕೊರತೆಯಿಲ್ಲ. ಮೋದಿ ಹಾಗೂ ಯೋಗಿ ಸರಕಾರಕ್ಕೆ ಕಳಂಕ ತರಲು ಯತ್ನಿಸುತ್ತಿದ್ದೀರಿ ಎಂದು ಹಲ್ಲೆ ನಡೆಸಿದ ಗುಂಪು ನಮ್ಮನ್ನು ನಿಂದಿಸಿತು.

- ಅವಿನಾಶ್, ಹಲ್ಲೆಗೊಳಗಾದನೆನ್ನಲಾದ ಸಾಮಾಜಿಕ ಕಾರ್ಯಕರ್ತ

ಹಲ್ಲೆ ನಡೆಸಿದ ಗುಂಪು ಬಲಪಂಥೀಯ ಸಂಘಟನೆಯ ಬೆಂಬಲಿಗರು. ಉತ್ತರಪ್ರದೇಶದ ಬಿಜೆಪಿ ಸರಕಾರದಿಂದ ಕೋವಿಡ್-19 ಪರಿಸ್ಥಿತಿಯ ತಪ್ಪು ನಿರ್ವಹಣೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ತಲೆದೋರಿರುವ ವಿನಾಶಕಾರಿ ಪರಿಸ್ಥಿತಿ ಕುರಿತ ನಮ್ಮ ಪ್ರಶ್ನೆಯಿಂದ ಅವರಿಗೆ ಇರಿಸುಮುರಿಸು ಉಂಟಾಗಿತ್ತು. ಆಕ್ಸಿಜನ್ ಕೊರತೆಯನ್ನು ತೋರಿಸುವ ಪೋಸ್ಟರ್‌ಗಳನ್ನು ಹಚ್ಚುತ್ತಿದ್ದುದಕ್ಕಾಗಿ ಅವರು ನಮ್ಮನ್ನು ಥಳಿಸಿದ್ದಾರೆ. ಸಾರ್ವಜನಿಕ ಹಿತಾಸಕ್ತಿಯ ವಿಷಯವನ್ನು ಕೋಮು ವಿಷಯವಾಗಿ ಪರಿವರ್ತಿಸಲು ಈ ಗುಂಪು ಯತ್ನಿಸಿತ್ತು.

- ಅನುಪಮ್, ಹಲ್ಲೆಗೊಳಗಾದನೆನ್ನಲಾದ ಸಾಮಾಜಿಕ ಕಾರ್ಯಕರ್ತ

ಹಲ್ಲೆ ನಡೆಸಿದ ದುಷ್ಕರ್ಮಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರಿ ಉನ್ನತ ಪೊಲೀಸ್ ಅಧಿಕಾರಿಗಳಿಗೆ ತಾನು ಇಮೇಲ್ ಸಂದೇಶ ಕಳುಹಿಸಿದ್ದೆ. ಆದರೆ ಈವರೆಗೆ ಪೊಲೀಸರು ಎಫ್‌ಐಆರ್ ದಾಖಲಿಸಿಲ್ಲ.

- ರೂಪಾ, ಹಲ್ಲೆಗೊಳಗಾದಳೆನ್ನಲಾದ ಸಾಮಾಜಿಕ ಕಾರ್ಯಕರ್ತೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News