×
Ad

ಕಿರಿಯ ಪ್ರಾಧ್ಯಾಪಕ ಹುದ್ದೆಗೆ ಸಚಿವ ಸತೀಶ್ ದ್ವಿವೇದಿ ಸಹೋದರ ರಾಜೀನಾಮೆ

Update: 2021-05-27 22:17 IST

‌ಲಕ್ನೋ, ಮೇ 27: ಉತ್ತರಪ್ರದೇಶದ ಸಚಿವ ಸತೀಶ್ ದ್ವಿವೇದಿ ಅವರ ಸಹೋದರ ಅರುಣ್ ಕುಮಾರ್ ದ್ವಿವೇದಿ ಅವರು ಕಪಿಲವಸ್ತುವಿನ ಸಿದ್ಧಾರ್ಥ ವಿಶ್ವವಿದ್ಯಾನಿಲಯದಲ್ಲಿ ಆರ್ಥಿಕ ದುರ್ಬಲ ವರ್ಗ (ಇಡಬ್ಲುಎಸ್) ಕೋಟಾದ ಅಡಿಯಲ್ಲಿ ಸಹಾಯಕ ಪ್ರಾಧ್ಯಾಪಕನಾಗಿ ನೇಮಕವಾಗಿರುವ ಬಗ್ಗೆ ವಿವಾದ ಎದ್ದಿದ್ದು, ಈ ಹಿನ್ನೆಲೆಯಲ್ಲಿ ಅರುಣ್ ಕುಮಾರ್ ದ್ವಿವೇದಿ ಅವರು ತನ್ನ ಹುದ್ದೆಗೆ ಮೇ 26ರಂದು ರಾಜೀನಾಮೆ ನೀಡಿದ್ದಾರೆ. ಈ ನಡುವೆ ಸಾಮಾಜಿಕ ಹೋರಾಟಗಾರ ನೂತನ್ ಠಾಕೂರ್ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದು, ಅರುಣ್ ಕುಮಾರ್ ದ್ವಿವೇದಿ ಅವರು ನೇಮಕಾತಿಗಾಗಿ ಸಲ್ಲಿಸಿದ ಆರ್ಥಿಕ ದುರ್ಬಲ ವರ್ಗ (ಇಡಬ್ಲುಎಸ್)ದ ಪ್ರಮಾಣ ಪತ್ರದ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. ‌

ಅರುಣ್ ಕುಮಾರ್ ದ್ವಿವೇದಿ ಅವರು ಕಪಿಲವಸ್ತುವಿನ ಸಿದ್ಧಾರ್ಥ ವಿಶ್ವವಿದ್ಯಾನಿಲಯದಲ್ಲಿ ಆರ್ಥಿಕ ದುರ್ಬಲ ವರ್ಗ (ಇಡಬ್ಲುಎಸ್) ಕೋಟಾದ ಅಡಿಯಲ್ಲಿ ಕಿರಿಯ ಪ್ರಾಧ್ಯಾಪಕರಾಗಿ ಮೇ 21ರಂದು ನೇಮಕರಾಗಿದ್ದರು. ಅವರು ಆರ್ಥಿಕ ದುರ್ಬಲ ವರ್ಗದ ಅಡಿಯಲ್ಲಿ ನೇಮಕವಾಗಿರುವುದು ವಿವಾದಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಸಿದ್ಧಾರ್ಥ ನಗರ ಜಿಲ್ಲೆಯ ಕೇಂದ್ರ ಕಚೇರಿಯಲ್ಲಿ ಅರುಣ್ ಕುಮಾರ್ ದ್ವಿವೇದಿ ಅವರು ಪತ್ರಿಕಾಗೋಷ್ಠಿ ನಡೆಸಿ ರಾಜೀನಾಮೆಯ ತನ್ನ ನಿರ್ಧಾರ ಪ್ರಕಟಿಸಿದ್ದಾರೆ. 

‘‘ಸಚಿವರ ಸಹೋದರನಾಗಿರುವುದು ಅಪರಾಧ ಹಾಗೂ ಬ್ರಾಹ್ಮಣನಾಗಿರುವುದು ಶಾಪ’’ ಎಂದು ಅವರು ಪ್ರತಿಪಾದಿಸಿದ್ದಾರೆ. ಸಿದ್ಧಾರ್ಥ ವಿಶ್ವವಿದ್ಯಾನಿಲಯದ ಉಪ ಕುಲಪತಿ ಪ್ರೊಫೆಸರ್ ಸುರೇಂದ್ರ ದುಬೆ ಅವರು ಅರುಣ್ ಕುಮಾರ್ ಅವರ ರಾಜೀನಾಮೆ ಸ್ವೀಕರಿಸಿದ್ದಾರೆ. ತನ್ನನ್ನು ಅರ್ಹತೆ ಆಧಾರದಲ್ಲಿ ಮನಃಶಾಸ್ತ್ರ ವಿಭಾಗಕ್ಕೆ ಕಿರಿಯ ಪ್ರಾಧ್ಯಾಪಕನ ಹುದ್ದೆಗೆ ಮೇ 21ರಂದು ನೇಮಕ ಮಾಡಲಾಗಿತ್ತು ಎಂದು ಅರುಣ್ ಕುಮಾರ್ ಅವರು ರಾಜೀನಾಮೆ ನೀಡುವ ಸಂದರ್ಭ ಹೇಳಿದ್ದಾರೆ. 

ವಿವಾದದಿಂದ ತಾನು ತೀವ್ರ ಮಾನಸಿಕವಾಗಿ ನೊಂದಿದ್ದೇನೆ. ಆದುದರಿಂದ ಸಹಾಯಕ ಪ್ರಾಧ್ಯಾಪಕನ ಹುದ್ದೆಗೆ ರಾಜೀನಾಮೆ ನೀಡಿದ್ದೇನೆ ಎಂದು ಅರುಣ್ ಕುಮಾರ್ ದ್ವಿವೇದಿ ಹೇಳಿದ್ದಾರೆ. ತನ್ನ ಸಹೋದರ ಹಾಗೂ ಕುಟುಂಬದ ಸಾಮಾಜಿಕ ಹಾಗೂ ರಾಜಕೀಯ ಗೌರವಕ್ಕಿಂತ ಹೆಚ್ಚು ಮುಖ್ಯವಾದದು ಯಾವುದೂ ಇಲ್ಲ. ತನ್ನ ಹುದ್ದೆ ಕೂಡ ಮುಖ್ಯವಲ್ಲ. ಆದುದರಿಂದ ತಾನು ಪೂರ್ಣ ಜವಾಬ್ದಾರಿ ತೆಗೆದುಕೊಂಡು ರಾಜೀನಾಮೆ ನೀಡುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News