ಎರಡನೇ ಕೋವಿಡ್ ಅಲೆಗೆ ಪ್ರಧಾನಿ ಮೋದಿಯವರೇ ಜವಾಬ್ದಾರರು: ರಾಹುಲ್ ಗಾಂಧಿ

Update: 2021-05-28 09:34 GMT

ಹೊಸದಿಲ್ಲಿ: ಕೊರೋನವೈರಸ್ ಸಾಂಕ್ರಾಮಿಕ ರೋಗದ ಎರಡನೇ ಅಲೆಗೆ ಪ್ರಧಾನಿ ನರೇಂದ್ರ ಮೋದಿಯವರೇ ಕಾರಣ ಎಂದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಕೇಂದ್ರದ ವಿರುದ್ಧ ತಮ್ಮ ವಾಗ್ದಾಳಿಯನ್ನು ತೀವ್ರಗೊಳಿಸಿದರು.

"ಭಾರತದಲ್ಲಿ ಕೋವಿಡ್ -19 ರ ಎರಡನೇ ಅಲೆಗೆ ಪ್ರಧಾನ ಮಂತ್ರಿಯವರೇ ಕಾರಣ . ಅವರಿಗೆ ಕೋವಿಡ್ ಅರ್ಥವಾಗಲೇ ಇಲ್ಲ. ತಮ್ಮ ಜವಾಬ್ದಾರಿಯನ್ನು ಪೂರೈಸುವಲ್ಲಿನ ಅವರ ವೈಫಲ್ಯವು ಎರಡನೇ ಅಲೆಗೆ ಕಾರಣವಾಯಿತು. ಭಾರತದ ಸಾವಿನ ಪ್ರಮಾಣವು ಸುಳ್ಳು. ಸರಕಾರ ಸತ್ಯವನ್ನು ಹೇಳಬೇಕು" ಎಂದು ಅವರು ಒತ್ತಾಯಿಸಿದರು.

"ಸರಕಾರವು ಕಾರ್ಯನಿರ್ವಹಿಸುತ್ತಿರುವ ವಿಧಾನವನ್ನು ಬದಲಾಯಿಸಬೇಕಾಗಿದೆ. ಇದೇ ವೇಗದಲ್ಲಿ ಲಸಿಕೆ ನೀಡುತ್ತಾ ಹೋದರೆ ಕೊರೋನದ ಹಲವು ಅಲೆಗಳು ಬಂದು ಅಪ್ಪಳಿಸುತ್ತವೆ. ಸುಳ್ಳು ಹಾಗೂ ಪ್ರಚಾರವು ಕೆಲಸ ಮಾಡುವುದಿಲ್ಲ, ಸಾವಿನ ಪ್ರಮಾಣದ ಕುರಿತು ಸುಳ್ಳುಗಳು ಹರಡುತ್ತಿವೆ, ಇದು ರಾಜಕೀಯದ ವಿಚಾರ ಅಲ್ಲ,  ಇದು ಜೀವ ಉಳಿಸುವ ವಿಚಾರ" ಎಂದು ರಾಹುಲ್ ಗಾಂಧಿ ಹೇಳಿದರು.

"ನಾನು ಹಾಗೂ ನನ್ನ ಪಕ್ಷದ ಇತರರು ಕೋವಿಡ್ ಬಗ್ಗೆ ಕೇಂದ್ರಕ್ಕೆ ಎಚ್ಚರಿಕೆ ನೀಡಿದ್ದೆವು, ಆದರೆ ಅವರು ನಮ್ಮನ್ನು ಅಪಹಾಸ್ಯ ಮಾಡುತ್ತಲೇ ಇದ್ದರು. ಸಮಸ್ಯೆಯೆಂದರೆ ಪ್ರಧಾನಿ ಹಾಗೂ  ಕೇಂದ್ರಕ್ಕೆ ಕೋವಿಡ್ ಅನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ, ಇದು ಕೇವಲ ಒಂದು ರೋಗವಲ್ಲ ಇದು  ವಿಕಾಸಗೊಳ್ಳುತ್ತಿರುವ ರೋಗ. ..  ಅದು ಇನ್ನಷ್ಟು ಅಪಾಯಕಾರಿಯಾಗುತ್ತದೆ'' ಎಂದರು.

ಸಾಂಕ್ರಾಮಿಕ ರೋಗವನ್ನು ಎದುರಿಸಲು ವ್ಯಾಕ್ಸಿನೇಷನ್ ಮಾತ್ರ ಪರಿಹಾರವಾಗಿದೆ.  ಆದರೆ ಲಾಕ್ಡೌನ್ ತಾತ್ಕಾಲಿಕ ಪರಿಹಾರವನ್ನು ನೀಡುತ್ತದೆ ಎಂದು ರಾಹುಲ್ ಗಾಂಧಿ ಹೇಳಿದರು. ತಮ್ಮ ಸರಕಾರದ ಲಸಿಕೆ ನೀತಿಯ ಬಗ್ಗೆ ಪ್ರಧಾನಿಗೆ ನೇರವಾಗಿ ಎಚ್ಚರಿಕೆ ನೀಡಿದ್ದೇನೆ ಎಂದು ಅವರು ಹೇಳಿದರು.

"ಕೇವಲ 3 ಪ್ರತಿಶತದಷ್ಟು (ಜನಸಂಖ್ಯೆಯಲ್ಲಿ) ಲಸಿಕೆ ಸಿಕ್ಕಿದೆ ... ನಾವು ವೈರಸ್‌ಗಾಗಿ ನಮ್ಮ ಬಾಗಿಲುಗಳನ್ನು ತೆರೆದಿಟ್ಟಿದ್ದೇವೆ, ವ್ಯಾಕ್ಸಿನೇಷನ್ ಮೂಲಕ ವ್ಯವಹಾರ ನಡೆಸಲಾಗುತ್ತಿದೆ.  ಲಸಿಕೆಗಳಿಗೆ ವಿಭಿನ್ನ ದರಗಳಿವೆ. ಈ ದರದಲ್ಲಿ ನಾವು ರಾಷ್ಟ್ರದ ಜನತೆಗೆ ಮೇ 2024 ರ ಹೊತ್ತಿಗೆ ಲಸಿಕೆ ನೀಡಲು ಸಾಧ್ಯವಾಗುತ್ತದೆ. ಲಸಿಕೆ ನೀಡದೆ ಇದ್ದರೆ ನಾವು ಅಲೆಯ ನಂತರ ಅಲೆ ಎದುರಿಸಬೇಕಾಗುತ್ತದೆ "ಎಂದು ಅವರು ಹೇಳಿದರು.

ದತ್ತಾಂಶವನ್ನು ಸರಕಾರ ನಿಗ್ರಹಿಸುತ್ತಿದೆ. ಮಾಹಿತಿಯನ್ನು ನಿಗ್ರಹಿಸುವುದು ಸರಕಾರದ ಆಲೋಚನೆ ಹಾಗೂ  ಇದು ಆರ್‌ಎಸ್‌ಎಸ್‌ನ ಕಲ್ಪನೆಯ ಕೇಂದ್ರವಾಗಿದೆ ... ಸಾವಿನ ಪ್ರಮಾಣ ಕುರಿತು ಸುಳ್ಳು ಹೇಳಿ, ಪತ್ರಕರ್ತರು ಸತ್ಯವನ್ನು ಹೇಳಲು ಬಿಡುತ್ತಿಲ್ಲ. ಟ್ವಿಟರ್, ಫೇಸ್‌ಬುಕ್‌ಗೆ ಒತ್ತಡ ಹೇರಲಾಗುತ್ತಿದೆ ಎಂದು ರಾಹುಲ್ ಗಾಂಧಿ  ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News