ಎರಡನೇ ಕೋವಿಡ್-19 ಮುಂಗಡ ಪಡೆಯಲು ಸದಸ್ಯರಿಗೆ ಅವಕಾಶ ನೀಡಿದ ಭವಿಷ್ಯ ನಿಧಿ ಸಂಸ್ಥೆ

Update: 2021-05-31 16:21 GMT

ಹೊಸದಿಲ್ಲಿ,ಮೇ 31: ಕೋರೊನವೈರಸ್ ಸಾಂಕ್ರಾಮಿಕದ ನಡುವೆ ಕಳೆದ ವರ್ಷದ ಮಾರ್ಚ್ ನಲ್ಲಿ ತನ್ನ ಐದು ಕೋಟಿ ಸದಸ್ಯರಿಗೆ ತುರ್ತು ಹಣಕಾಸು ಅಗತ್ಯಗಳನ್ನು ಪೂರೈಸಿಕೊಳ್ಳಲು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಮುಂಗಡ ಪಡೆದುಕೊಳ್ಳುವ ಸೌಲಭ್ಯವನ್ನು ಜಾರಿಗೊಳಿಸಿದ್ದ ಭವಿಷ್ಯನಿಧಿ ಸಂಸ್ಥೆ (ಇಪಿಎಫ್ಒ)ಯು ಎರಡನೇ ಅಲೆಯಲ್ಲಿಯೂ ಮತ್ತೊಮ್ಮೆ ಈ ಸೌಲಭ್ಯವನ್ನು ಒದಗಿಸಿದೆ.


ಸದಸ್ಯರು ತಮ್ಮ ಮೂರು ತಿಂಗಳ ವೇತನ (ಮೂಲವೇತನ+ತುಟ್ಟಿಭತ್ಯೆ) ಅಥವಾ ತಮ್ಮ ಪಿಎಫ್ ಖಾತೆಯಲ್ಲಿ ಜಮಾ ಆಗಿರುವ ಮೊತ್ತದ ಶೇ.75ರವರೆಗೆ;ಇವುಗಳಲ್ಲಿ ಯಾವುದು ಕಡಿಮೆಯೋ ಅಷ್ಟನ್ನು ಮುಂಗಡವಾಗಿ ಪಡೆದುಕೊಳ್ಳಬಹುದು. ಇದಕ್ಕಿಂತಲೂ ಕಡಿಮೆ ಮೊತ್ತಕ್ಕೂ ಅವರು ಅರ್ಜಿ ಸಲ್ಲಿಸಬಹುದು ಎಂದು ಕೇಂದ್ರ ಕಾರ್ಮಿಕ ಸಚಿವಾಲಯವು ತಿಳಿಸಿದೆ.
 
ಕೋವಿಡ್ ಮುಂಗಡವು ಈ ಸಾಂಕ್ರಾಮಿಕದ ಬಿಕ್ಕಟ್ಟಿನಲ್ಲಿ ನೌಕರ ವರ್ಗದವರಿಗೆ, ವಿಶೇಷವಾಗಿ ಮಾಸಿಕ 15,000 ರೂ.ಗಿಂತ ಕಡಿಮೆ ವೇತನ ಪಡೆಯುವರಿಗೆ ಹಣಕಾಸು ಮುಗ್ಗಟ್ಟನ್ನು ನೀಗಿಸಿಕೊಳ್ಳಲು ನೆರವಾಗಿದ್ದು, ಇಪಿಎಫ್ಒ ಈವರೆಗೆ 76.31 ಲಕ್ಷ ಫಲಾನುಭವಿಗಳಿಗೆ ಒಟ್ಟು 18,698 ಕೋ.ರೂ.ಗಳ ಮುಂಗಡವನ್ನು ಪಾವತಿಸಿದೆ. ಈ ಮುಂಗಡವನ್ನು ಸಂಸ್ಥೆಗೆ ಮರುಪಾವತಿಸಬೇಕಿಲ್ಲ.
 
ಮೊದಲ ಕೋವಿಡ್-19 ಮುಂಗಡವನ್ನು ಪಡೆದುಕೊಂಡಿದ್ದ ಸದಸ್ಯರೂ ಎರಡನೇ ಮುಂಗಡವನ್ನು ಪಡೆಯಬಹುದು. ಮುಂಗಡ ಅರ್ಜಿಗಳನ್ನು ಮೂರು ದಿನಗಳಲ್ಲಿ ಇತ್ಯರ್ಥಗೊಳಿಸಲಾಗುವುದು ಎಂದು ಸಚಿವಾಲಯವು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News