ಸತತ ಆರನೇ ಬಾರಿ ರೆಪೊ ದರವನ್ನು ಬದಲಿಸದ ಆರ್ ಬಿ ಐ
ಹೊಸದಿಲ್ಲಿ,ಜೂ.4: ಶುಕ್ರವಾರ ತನ್ನ ದ್ವೈಮಾಸಿಕ ವಿತ್ತೀಯ ನೀತಿಯನ್ನು ಪ್ರಕಟಿಸಿರುವ ಆರ್‌ಬಿಐ ಸತತ ಆರನೇ ಸಲ ರೆಪೊ ದರದಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಂಡಿದೆ. ಇದೇ ವೇಳೆ ಅದು ಹಾಲಿ ಹಣಕಾಸು ವರ್ಷಕ್ಕೆ ಆರ್ಥಿಕ ಬೆಳವಣಿಗೆಯ ತನ್ನ ಅಂದಾಜನ್ನು ಕೋವಿಡ್ ಎರಡನೇ ಅಲೆಯ ಹಿನ್ನೆಲೆಯಲ್ಲಿ ಈ ಮೊದಲಿನ ಶೇ.10.5ರಿಂದ ಶೇ.9.5ಕ್ಕೆ ತಗ್ಗಿಸಿದೆ.
ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದ ವಿತ್ತೀಯ ನೀತಿ ಸಮಿತಿಯು ಶೇ.4 ರೆಪೊ ದರವನ್ನು ಮತ್ತು ಶೇ.3.35 ರಿವರ್ಸ್ ರೆಪೊ ದರವನ್ನು ಮುಂದುವರಿಸಿದೆ.
ಮುಖ್ಯವಾಗಿ ಕೋವಿಡ್ ಎರಡನೇ ಅಲೆಯ ಪರಿಣಾಮಗಳ ಕುರಿತು ಅನಿಶ್ಚಿತತೆಯಿಂದಾಗಿ ಆರ್‌ಬಿಐ ತನ್ನ ಹೊಂದಾಣಿಕೆಯ ನಿಲುವಿಗೆ ಅಂಟಿಕೊಂಡಿದೆ.
ರೆಪೊ ಆರ್‌ಬಿಐ ಬ್ಯಾಂಕುಗಳಿಗೆ ನೀಡುವ ಸಾಲಗಳ ಮೇಲಿನ ಬಡ್ಡಿದರವಾಗಿದ್ದರೆ ರಿವರ್ಸ್ ರೆಪೊ ಅದು ಬ್ಯಾಂಕುಗಳಿಂದ ಪಡೆಯುವ ಸಾಲಗಳ ಮೇಲಿನ ಬಡ್ಡಿದರವಾಗಿದೆ. ದ್ವೈಮಾಸಿಕ ವಿತ್ತೀಯ ನೀತಿಯನ್ನು ಪ್ರಕಟಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಾಸ್,ಪ್ರಸಕ್ತ ಹಣಕಾಸು ವರ್ಷದಲ್ಲಿ ಚಿಲ್ಲರೆ ಹಣದುಬ್ಬರವು ಶೇ.5.1ರಷ್ಟಾಗುವ ಸಾಧ್ಯತೆಯಿದೆ ಎಂದು ತಿಳಿಸಿದರು.
ವಾರ್ಷಿಕ ಹಣದುಬ್ಬರವನ್ನು 2026,ಮಾ.31ರವರೆಗೆ ಪ್ಲಸ್ 2 ಮತ್ತು ಮೈನಸ್ 2ರ ಮಿತಿಗಳೊಂದಿಗೆ ಶೇ.4ರಲ್ಲಿ ಕಾಯ್ದುಕೊಳ್ಳುವ ಹೊಣೆಗಾರಿಕೆ ಆರ್‌ಬಿಐ ಮೇಲಿದೆ. ಅದು ತನ್ನ ದ್ವೈಮಾಸಿಕ ವಿತ್ತೀಯ ನೀತಿಯನ್ನು ನಿರ್ಧರಿಸುವಾಗ ಚಿಲ್ಲರೆ ಹಣದುಬ್ಬರವನ್ನು ಪ್ರಮುಖವಾಗಿ ಪರಿಗಣಿಸುತ್ತದೆ.
ಆರ್‌ಬಿಐ ಕೊನೆಯ ಬಾರಿ 2020,ಮೇ 22ರಂದು ಬಡ್ಡಿದರಗಳಲ್ಲಿ ಬದಲಾವಣೆ ಮಾಡಿತ್ತು. ಕಳೆದ ವರ್ಷದ ಫೆಬ್ರುವರಿಯಿಂದ ಅದು ಬಡ್ಡಿದರಗಳನ್ನು ಒಟ್ಟು 115 ಮೂಲಾಂಕಗಳಷ್ಟು ಕಡಿತಗೊಳಿಸಿದೆ.
ರಾಜ್ಯಗಳಿಗೆ ತೆರಿಗೆ ಆದಾಯ ಕೊರತೆಯನ್ನು ತುಂಬಿಕೊಡಲು 2021-22ನೇ ಸಾಲಿನಲ್ಲಿ ನಿಗದಿತ 12.06 ಲ.ಕೋ.ರೂ. ಸಾಲಗಳ ಜೊತೆಗೆ ಹೆಚ್ಚುವರಿಯಾಗಿ 1.58 ಕೋ.ರೂ.ಗಳ ಸಾಲವನ್ನು ಪಡೆಯುವುದಾಗಿ ಸರಕಾರವು ಕಳೆದ ವಾರ ತಿಳಿಸಿತ್ತು.
ಕೋವಿಡ್ ಎರಡನೇ ಅಲೆಯ ಮಧ್ಯೆ ಕಿರು,ಸಣ್ಣ ಮತ್ತು ಮಧ್ಯಮ ಉದ್ಯಮ (ಎಂಎಸ್‌ಎಂಇ)ಗಳಿಗೆ ನೆಮ್ಮದಿಯನ್ನು ಮೂಡಿಸುವ ಪ್ರಯತ್ನವಾಗಿ ಆರ್‌ಬಿಐ ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ (ಸಿಡ್ಬಿ)ಗೆ 16,000ಕೋ.ರೂ.ಗಳ ವಿಶೇಷ ದ್ರವ್ಯತೆ ಸೌಲಭ್ಯವನ್ನು ವಿಸ್ತರಿಸಿದೆ. ಈ ವಲಯದಲ್ಲಿ 50 ಕೋ.ರೂ.ವರೆಗಿನ ಸಾಲಗಳ ಪುನರ್‌ರಚನೆಗೂ ಅದು ಅವಕಾಶವನ್ನು ಕಲ್ಪಿಸಿದೆ.