ಪರಿಹಾರ ಸಾಮಗ್ರಿಗಳನ್ನು ಕಳವುಗೈದ ಆರೋಪ: ಬಿಜೆಪಿಯ ಸುವೇಂದು ಅಧಿಕಾರಿ, ಸಹೋದರನ ವಿರುದ್ಧ ಪ್ರಕರಣ ದಾಖಲು

Update: 2021-06-06 18:06 GMT

ಹೊಸದಿಲ್ಲಿ,ಜೂ.6: ಪುರ್ಬಾ ಮೇದಿನಿಪುರ ಜಿಲ್ಲೆಯ ಕಾಂತಿ ನಗರಡಾಳಿತ ಕಚೇರಿ ಯಿಂದ ಏಳು ಲಕ್ಷ ರೂ. ವೌಲ್ಯದ ಪರಿಹಾರ ಸಾಮಾಗ್ರಿಗಳನ್ನು ಕಳವುಗೈದ ಆರೋಪದಲ್ಲಿ ಬಿಜೆಪಿ ನಾಯಕ ಹಾಗೂ ಅವರ ಸಹೋದರನ ವಿರುದ್ಧ ಪಶ್ಚಿಮಬಂಗಾಳ ಪೊಲೀಸರು ಶನಿವಾರ ಪ್ರಕರಣ ದಾಖಲಿಸಿದ್ದಾರೆ.
   
ಕಾಂತಿ ಮುನ್ಸಿಪಲ್ ಆಡಳಿತ ಮಂಡಳಿಯ ಸದಸ್ಯ ರತ್ನದೀಪ್ ಮನ್ನಾ ನೀಡಿದ ದೂರಿನ ಹಿನ್ನೆಲೆಯಲ್ಲಿ ಸುವೇಂದು ಅಧಿಕಾರಿ ಹಾಗೂ ಅವರ ಸೋದನ ವಿರುದ್ಧ ಕಾಂತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     ‘‘2021ರ ಮೇ 29ರಂದು ಮಧ್ಯಾಹ್ನ 1:30ರ ವೇಳೆಗೆ ಸುವೇಂದು ಅಧಿಕಾರಿ ಹಾಗೂ ಅವರ ಸಹೋದರ ಮತ್ತು ಕಾಂತಿ ನಗರಸಭೆಯ ಮಾಜಿ ಅಧ್ಯಕ್ಷರೂ ಆಗಿರುವ ಸೌಮೇಂದು ಅಧಿಕಾರಿ ಅವರು ನಗರಸಭಾ ಕಾರ್ಯಾಲಯದ ಗೋದಾಮಿನ ಬೀ ವನ್ನು ಬಲವಂತವಾಗಿ ತೆರೆದು ಮೂರು ಲಕ್ಷ ರೂ. ಮೌಲ್ಯದ ಪರಿಹಾರ ಸಾಮಾಗ್ರಿಗಳನ್ನು ಬಲವಂತವಾಗಿ ಅಪಹರಿಸಿದ್ದಾರೆಂದು ಮನ್ನಾ ಅವರು ಕಾಂತಿ ಪೊಲೀಸ್ ಠಾಣೆಗೆ ಜೂನ್ 1ರಂದು ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.
  
ಬಿಜೆಪಿ ಈ ಮೊದಲು ತೃಣಮೂಲ ಕಾಂಗ್ರೆಸ್ ನಾಯಕರ ವಿರುದ್ಧ ಪದೇ ಪದೇ ಪರಿಹಾರ ಸಾಮಾಗ್ರಿಗಳನ್ನು ಲಪಟಾಯಿಸಿರುವುದಾಗಿ ಆರೋಪಿಸುತ್ತಾ ಬಂದಿದೆ. ಇದೀಗ ಟಿಎಂಸಿಯು ಸುವೇಂದು ಅಧಿಕಾರಿ ಹಾಗೂ ಅವರ ಸೋದರನ ವಿರುದ್ಧ ಪ್ರತ್ಯಾರೋಪ ಮಾಡುವ ಮೂಲಕ ಬಿಜೆಪಿಗೆ ಎದಿರೇಟು ನೀಡಿದೆ.

ಪರಿಹಾರ ಸಾಮಗ್ರಿಗಳನ್ನು ಕಳವು ಗೈಯಲು ಅವುಗಳ ಭದ್ರತೆಗೆ ನಿಯೋಜಿತರಾಗಿದ್ದ ಭದ್ರತಾ ಸಿಬ್ಬಂದಿಗಳನ್ನು ನೆರವು ಪಡೆದುಕೊಂಡಿತ್ತೆಂದು ದೂರಿನಲ್ಲಿ ತಿಳಿಸಲಾಗಿದೆ.
 ಆದಾಗ್ಯೂ ಈ ಬಗ್ಗೆ ಸುವೇಂದು ಅಧಿಕಾರಿ ಈತನಕ ಯಾವುದೇ ಪ್ರತಿಕ್ರಿಯೆ ನೀಡಿಲ್ಲವೆಂದು ತಿಳಿದುಬಂದಿದೆ.
  
ಮಮತಾ ಬ್ಯಾನರ್ಜಿ ಸರಕಾರದಲ್ಲಿ ಸಂಪುಟ ಸಚಿವರಾಗಿದ್ದ ಸುವೇಂದು ಅಧಿಕಾರಿ 2020ರ ಡಿಸೆಂಬರ್ನಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಪ್ರಸಕ್ತ ಅವರು ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿದ್ದಾರೆ.

  ಇತ್ತೀಚೆಗೆ ನಡೆದ ಪಶ್ಚಿಮಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಸುವೇಂದು ಅಧಿಕಾರಿ ಅವರು ಮಮತಾ ಬ್ಯಾನರ್ಜಿ ಅವರನ್ನು 1200 ಮತಗಳ ಅಂತರದಿಂದ ಪರಾಭವಗೊಳಿಸಿದ್ದರು.

ಉದ್ಯೋಗ ವಂಚನೆ ಪ್ರಕರಣ: ಸುವೇಂದು ನಿಕಟವರ್ತಿ ಬಂಧನ

ಈ ಮಧ್ಯೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಕೋಲ್ಕತಾ ಪೊಲೀಸರು ಅಧಿಕಾರಿ ಅವರ ನಿಕಟವರ್ತಿ ರಖಲ್ ಬೇರಾ ಅವರನ್ನು ಬಂಧಿಸಿದ್ದಾರೆ. 2019ರಲ್ಲಿ ನೀರಾವರಿ ಮತ್ತು ಜಲಸಾರಿಗೆ ಸಚಿವಾಲಯದಲ್ಲಿ ಉದ್ಯೋಗ ಕೊಡಿಸುವ ಭರವಸೆ ನೀಡಿ ವ್ಯಕ್ತಿಯೊಬ್ಬರಿಂದ 9 ಲಕ್ಷ ರೂ.ಪಡೆದಿರುವ ಆರೋಪವನ್ನು ರಖಲ್ ವಿರುದ್ಧ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News