ಜಿತಿನ್ ಪ್ರಸಾದ್ ರನ್ನು ಬಿಜೆಪಿಗೆ ಸ್ವಾಗತಿಸಿದ ಜ್ಯೋತಿರಾದಿತ್ಯ ಸಿಂಧಿಯಾ
ಹೊಸದಿಲ್ಲಿ: ತನ್ನ ದೀರ್ಘಕಾಲದ ಕಾಂಗ್ರೆಸ್ ಮುಖಂಡ ಜಿತಿನ್ ಪ್ರಸಾದ ಅವರು ಬಿಜೆಪಿಗೆ ಸೇರ್ಪಡೆಯಾದ ಕೂಡಲೇ, ಅವರಿಗೆ ಒಂದು ವರ್ಷದ ಹಿಂದೆ ಬಿಜೆಪಿಗೆ ಸೇರಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಅವರು ವಿಶೇಷ ಸ್ವಾಗತ ಕೋರಿದರು.
"ಅವರು ನನ್ನ ಕಿರಿಯ ಸಹೋದರನಂತೆ ಇದ್ದಾರೆ ಹಾಗೂ ನಾನು ಅವರನ್ನು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸ್ವಾಗತಿಸುತ್ತೇನೆ. ನಾನು ಅವರನ್ನು ಅಭಿನಂದಿಸುತ್ತೇನೆ" ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಜ್ಯೋತಿರಾದಿತ್ಯ ಸಿಂಧಿಯಾ ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.
ಉತ್ತರ ಪ್ರದೇಶದ ಕಾಂಗ್ರೆಸ್ಸಿನ ಪ್ರಮುಖ ಬ್ರಾಹ್ಮಣ ನಾಯಕರಾಗಿದ್ದ ಜಿತಿನ್ ಪ್ರಸಾದ ಅವರು ಇಂದು ದಿಲ್ಲಿಯಲ್ಲಿ ಬಿಜೆಪಿಗೆ ಸೇರಿದ್ದಾರೆ. ಬಿಜೆಪಿ ದೇಶದ ಏಕೈಕ ರಾಷ್ಟ್ರೀಯ ಪಕ್ಷ ವಾಗಿದೆ ಎಂದು ಜಿತಿನ್ ಕೊಂಡಾಡಿದ್ದಾರೆ.
ಸಿಂಧಿಯಾ ಕಳೆದ ವರ್ಷದ ಮಾರ್ಚ್‌ನಲ್ಲಿ ಕಾಂಗ್ರೆಸ್ ತೊರೆದು 22 ಶಾಸಕರೊಂದಿಗೆ ಬಿಜೆಪಿಗೆ ಸೇರಿಕೊಂಡಿದ್ದರು, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಸರಕಾರವನ್ನು ಉರುಳಲು ಕಾರಣವಾಗಿದ್ದರು.