ಆಸಿಫ್‌ ಗುಂಪುಹತ್ಯೆ ಪ್ರಕರಣ: ಪ್ರತ್ಯಕ್ಷಸಾಕ್ಷಿಯ ಹೇಳಿಕೆ ನಡುವೆಯೂ ನಾಲ್ವರು ಆರೋಪಿಗಳಿಗೆ ಕ್ಲೀನ್‌ ಚಿಟ್‌

Update: 2021-06-10 14:35 GMT

ಹರ್ಯಾಣದಲ್ಲಿ ಮೇ 17ರಂದು ಆಸಿಫ್‌ ಮತ್ತು ರಶೀದ್‌ ಎಂಬ ಇಬ್ಬರು ಯುವಕರ ಮೇಲೆ ಗುಂಪೊಂದು ಹಲ್ಲೆ ನಡೆಸಿತ್ತು. ಸ್ಥಳದಲ್ಲೇ ಆಸಿಫ್‌ ನಿಧನರಾಗಿದ್ದರು. ಗಂಭೀರ ಗಾಯಗೊಂಡ ರಶೀದ್‌ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಡುವೆ ಪ್ರತ್ಯಕ್ಷ ಸಾಕ್ಷಿ ಆರೋಪಿಗಳ ಗುರುತು ಹೇಳಿದ ನಡುವೆಯೂ ನಾಲ್ವರು ಪ್ರಮು ಆರೋಪಿಗಳಿಗೆ ಪೊಲೀಸರು ಕ್ಲೀನ್‌ ಚಿಟ್‌ ನೀಡಿ ಬಿಡುಗಡೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಈ ನಾಲ್ವರು ಪ್ರಮುಖ ಆರೋಪಿಗಳ ಕುರಿತು ಚಾರ್ಜ್‌ ಶೀಟ್‌ ಸಲ್ಲಿಸುವ ಮುಂಚೆಯೇ ಕ್ಲೀನ್‌ ಚಿಟ್‌ ನೀಡಿದ ವಿಚಾರ ತಿಳಿದು ಆಸಿಫ್‌ ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ ಎಂದು  thequint.com ವರದಿ ಮಾಡಿದೆ. ಪ್ರಕರಣದ ಕುರಿತು ಪ್ರತ್ಯಕ್ಷ ಸಾಕ್ಷಿಯಾಗಿದ್ದ ರಶೀದ್‌ ಆರೋಪಿಗಳ ವಿವರವನ್ನು ಹೇಳಿಕೆಯಲ್ಲಿ ನೀಡಿದ್ದರು ಎಂದು ವರದಿ ಉಲ್ಲೇಖಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 14 ಮಂದಿಯನ್ನು ಹೆಸರಿಸಲಾಗಿದೆ. ಆಸಿಫ್‌ ತಂದೆ ಝಾಕಿರ್‌ ಪ್ರಕರಣ ದಾಖಲಿಸುವ ಸಂದರ್ಭದಲ್ಲಿ ಪಕ್ಕದಲ್ಲೇ ಇದ್ದ ರಶೀದ್‌ ಆರೋಪಿಗಳ ಹೆಸರನ್ನು ಉಲ್ಲೇಖಿಸಿದ್ದರು. ಮರುದಿನವೇ ಈ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿತ್ತು. ಆರೋಪಿಗಳನ್ನು ಬೆಂಬಲಿಸಿ ಕರ್ಣಿ ಸೇನಾ ಮುಖ್ಯಸ್ಥ ಸೇರಿದಂತೆ ಹಲವರು ಕೋವಿಡ್‌ ನಡುವೆಯೇ ಮಹಾಪಂಚಾಯತ್‌ ನಡೆಸಿ ಪ್ರಚೋದನಕಾರಿ ಭಾಷಣ ಮಾಡಿದ್ದರು ಎಂದು ವರದಿ ತಿಳಿಸಿದೆ.

ಹತ್ಯೆಯಾದ ಆಸಿಫ್‌ (photo: thequint)

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಎಫ್‌ ಐಆರ್‌ ದಾಖಲಿಸಲು ಅವಕಾಶವಿರದ್ದು ಆಸಿಫ್‌ ಕುಟುಂಬ ಪೊಲೀಸರೊಂದಿಗಿನ ನಂಬಿಕೆ ಕಳೆದುಕೊಳ್ಳುವಂತೆ ಮಾಡಿದೆ ಎಂದು ವರದಿಯಾಗಿದೆ. "ನಾಲ್ಕು ಮಂದಿ ಯಾವುದೇ ಕಾರಣವಿಲ್ಲದೇ ಬಂದು ನಮ್ಮನ್ನು ಥಳಿಸಿದರು. ಅವರು ಪಾನಮತ್ತರಾಗಿದ್ದರು ಮತ್ತು ಯಾವುದೋ ಪಾರ್ಟಿ ಮುಗಿಸಿ ಬಂದವರಂತೆ ಕಾಣುತ್ತಿದ್ದರು" ಎಂದು ರಶೀದ್‌ ʼದಿ ಕ್ವಿಂಟ್‌ʼ ಗೆ ಹೇಳಿಕೆ ನೀಡಿದ್ದಾರೆ.

ಗಂಭೀರ ಗಾಯಗೊಂಡ ರಶೀದ್‌ (photo: thequint)

"ನನಗೆ ಅವರೆಲ್ಲರ ಹೆಸರು ತಿಳಿದಿದೆ. ಪರಿಚಯವೂ ಇದೆ. ಅವರು ಇಲ್ಲೇ ಸಮೀಪದಲ್ಲಿ ವಾಸಿಸುತ್ತಾರೆ. ನಾನು ಅವರನ್ನು ನನ್ನ ಸ್ವಂತ ಕಣ್ಣುಗಳಿಂದ ನೋಡಿದ್ದೇನೆ. ಆದರೆ ಅವರನ್ನು ಪೊಲೀಸರು ನಿರಪರಾಧಿಗಳನ್ನಾಗಿಸಿದ್ದು ಏಕೆಂದು ತಿಳಿದಿಲ್ಲ. ಪೊಲೀಸರು ಈ ಆರೋಪಿಗಳನ್ನು ಬಿಡುಗಡೆ ಮಾಡುವ ಮುಂಚೆ ನಮ್ಮನ್ನಾಗಲಿ ನಮ್ಮ ಕುಟುಂಬವನ್ನಾಗಲಿ ಪೊಲೀಸರು ಸಂಪರ್ಕಿಸಿಲ್ಲ" ಎಂದು ಅವರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News