ತೆಲಂಗಾಣ:ಶಾಸಕ ಸ್ಥಾನಕ್ಕೆ ರಾಜೇಂದರ್ ರಾಜೀನಾಮೆ
ಹೈದರಾಬಾದ್: ಮಾಜಿ ಆರೋಗ್ಯ ಹಾಗೂ ಹಣಕಾಸು ಸಚಿವ ಇಟಾಲಾ ರಾಜೇಂದರ್ ಅವರು ಶನಿವಾರ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ವಿಧಾನಸಭೆಯ ಎದುರಿನ ಗನ್ ಪಾರ್ಕ್‌ನಲ್ಲಿರುವ ಹುತಾತ್ಮರ ಸ್ಮಾರಕದಲ್ಲಿ ತೆಲಂಗಾಣ ಹುತಾತ್ಮರಿಗೆ ಅವರು ಪುಷ್ಪ ಗೌರವ ಸಲ್ಲಿಸಿದರು.
ತಮ್ಮ ರಾಜೀನಾಮೆ ಪತ್ರವನ್ನು ವಿಧಾನಸಭಾ ಸ್ಪೀಕರ್ ಶ್ರೀನಿವಾಸ ರೆಡ್ಡಿ ಅವರಿಗೆ ನೀಡಿದ ರಾಜೇಂದರ್ ಟಿ ಆರ್ ಎಸ್ ನ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದರು. ಜೂನ್ 14 ರಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರಲು ಸಜ್ಜಾಗಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ರಾಜೇಂದರ್, ತೆಲಂಗಾಣದಲ್ಲಿ ಕೆ. ಚಂದ್ರಶೇಖರ್ ರಾವ್ ಅವರ ದುರಾಡಳಿತವನ್ನು ಕೊನೆಗೊಳಿಸುವುದು ನನ್ನ ಕಾರ್ಯಸೂಚಿಯಾಗಿದೆ ಹಾಗೂ ಬಿಜೆಪಿಗೆ ಸೇರಲು ಇದೇ ಕಾರಣ ಎಂದು ಉಲ್ಲೇಖಿಸಿದ್ದಾರೆ.
ಹುಝುರಾಬಾದ್ ಅಸೆಂಬ್ಲಿ ಕ್ಷೇತ್ರವನ್ನು ಪ್ರತಿನಿಧಿಸುವ ರಾಜೇಂದರ್ ಅವರನ್ನು ಒಂದು ತಿಂಗಳ ಹಿಂದೆ ಸಂಪುಟದಿಂದ ವಜಾ ಮಾಡಲಾಗಿತ್ತು, ರಾಜೇಂದರ್ ವಿರುದ್ಧ ಭೂ ಕಬಳಿಕೆ ಆರೋಪ ಕೇಳಿಬಂದಿತ್ತು. ಆರೋಪಗಳ ಬಗ್ಗೆ ತನಿಖೆ ನಡೆಸಲು ರಾಜ್ಯ ಸರಕಾರ ಆದೇಶಿಸಿದೆ. ಆದರೆ, ರಾಜೇಂದರ್ ಅವರು ಹೈಕೋರ್ಟ್‌ನಲ್ಲಿ ಸರಕಾರದ ತನಿಖೆಯನ್ನು ಪ್ರಶ್ನಿಸಿದರು.