ʼಕ್ಲಬ್‌ ಹೌಸ್‌ʼ ನಲ್ಲಿ ಪಾಕಿಸ್ತಾನಿ ಪತ್ರಕರ್ತನೊಂದಿಗೆ ದಿಗ್ವಿಜಯ್‌ ಸಿಂಗ್‌ ಮಾತು: ಬಿಜೆಪಿ ನಾಯಕರ ಆಕ್ರೋಶ

Update: 2021-06-12 11:32 GMT

ಹೊಸದಿಲ್ಲಿ: ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವೊದಗಿಸುವ ಸಂವಿಧಾನದ 370ನೇ ವಿಧಿ ರದ್ದತಿಯನ್ನು ಮರುಪರಿಶೀಲಿಸುವುದಾಗಿ ಪಾಕಿಸ್ತಾನಿ ಪತ್ರಕರ್ತರೊಬ್ಬರ ಜತೆಗೆ ಮಾತನಾಡುವ ವೇಳೆ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರು ನೀಡಿದ ಹೇಳಿಕೆ ವಿವಾದಕ್ಕೀಡಾಗಿದ್ದು ಸಿಂಗ್ ಅವರನ್ನು ಅಮಿತ್ ಮಾಲವಿಯ, ಜಿತೇಂದ್ರ ಸಿಂಗ್, ಮಧ್ಯ ಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಸಹಿತ ಹಲವು ಬಿಜೆಪಿ ನಾಯಕರು ಟೀಕಿಸಿ ಟ್ವೀಟ್ ಮಾಡಿದ್ದಾರೆ ಹಾಗೂ #ಆರ್ಟಿಕಲ್370 ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಆಗಿದೆ.

ಸೋಶಿಯಲ್ ಮೀಡಿಯಾ ಆ್ಯಪ್ ಕ್ಲಬ್ ಹೌಸ್ ನಲ್ಲಿ ನಡೆದ ಚರ್ಚೆಯೊಂದರ ಸಂದರ್ಭ ಪಾಕ್ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಸಿಂಗ್ ಮೇಲಿನಂತೆ ಉತ್ತರ ನೀಡಿದ್ದರು.

ಇದಕ್ಕೆ ಟ್ವಿಟ್ಟರ್‍ನಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಲವಿಯ "ಕ್ಲಬ್ ಹೌಸ್ ಚ್ಯಾಟ್‍ನಲ್ಲಿ ರಾಹುಲ್ ಗಾಂಧಿಯವರ ಪ್ರಮುಖ  ಸಮೀಪವರ್ತಿ ದಿಗ್ವಿಜಯ ಸಿಂಗ್ ಅವರು ಪಾಕಿಸ್ತಾನಿ ಪತ್ರಕರ್ತರ ಜತೆ ಮಾತನಾಡುತ್ತಾ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅವರು 370ನೇ ವಿಧಿ ರದ್ಧತಿ ನಿರ್ಧಾರ ಮರುಪರಿಶೀಲಿಸುವುದಾಗಿ ಹೇಳಿದ್ದಾರೆ. ನಿಜವಾಗಿಯೂ? ಪಾಕಿಸ್ತಾನಕ್ಕೆ ಇದೇ ಬೇಕಾಗಿದೆ" ಎಂದು ಬರೆದಿದ್ದಾರೆ.

"ಹೊರಗೆ ಭಾರತದ ವಿರುದ್ಧ ಅವರು ದ್ವೇಷ ಬಿತ್ತುತ್ತಿದ್ದಾರೆ," ಎಂದು  ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದು, ಸಿಂಗ್ ಅವರ ಹೇಳಿಕೆ ಟೂಲ್ ಕಿಟ್ ಒಂದರ ಭಾಗ ಎಂದೂ ಹೇಳಿಕೆ ನೀಡಿದ್ದಾರೆ.

ಜಮ್ಮು ಕಾಶ್ಮೀರದ ಮಾಜಿ ಉಪಮುಖ್ಯಮಂತ್ರಿ ಕವೀಂದರ್ ಗುಪ್ತಾ ಅವರು ದಿಗ್ವಿಜಯ್ ಸಿಂಗ್ ಅವರ ಹೇಳಿಕೆ ನಾಚಿಕೆಗೇಡು ಎಂದು ಬಣ್ಣಿಸಿದ್ದಾರಲ್ಲದೆ ಅವರು ಕೂಡ ಇದೊಂದು ಟೂಲ್ ಕಿಟ್ ಅಭಿಯಾನ ಎಂದಿದ್ದಾರೆ. "ಪಾಕಿಸ್ತಾನಕ್ಕೆ 370ನೇ ವಿಧಿ ಮರುಸ್ಥಾಪನೆ ಬೇಕಿದೆ. ದಿಗ್ವಿಜಯ್ ಸಿಂಗ್ ಅವರು ಅವರದ್ದೇ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ" ಎಂದು ಅವರು ಆರೋಪಿಸಿದ್ದಾರೆ.

ಸಿಂಗ್ ಅವರ ದನಿಯದ್ದೆಂದು ಹೇಳಲಾದ ಆಡಿಯೋ ಕ್ಲಿಪ್ ನಲ್ಲಿ ಅವರು  ಹೀಗೆ ಮಾತನಾಡುತ್ತಿರುವುದು ಕೇಳಿಸುತ್ತದೆ. "ಅವರು 370ನೇ ವಿಧಿ ರದ್ದುಗೊಳಿಸಿದಾಗ ಕಾಶ್ಮೀರದಲ್ಲಿ ಪ್ರಜಾಪ್ರಭುತ್ವ ಇರಲಿಲ್ಲ. ಎಲ್ಲರನ್ನೂ ಜೈಲಿಗೆ ಹಾಕಿದಾಗ ಮಾನವೀಯತೆಯಿರಲಿಲ್ಲ. ಜಾತ್ಯತೀತತೆಯ ಆಧಾರವೇ ಅಲ್ಲಿ ಕಾಶ್ಮೀರಿಯತ್ ಆಗಿದೆ. ಕಾಶ್ಮೀರದಲ್ಲಿ ಆಡಳಿತ ಸೇವೆಗಳಿಗೆ ಮೀಸಲಾತಿಯನ್ನು ಕಾಶ್ಮೀರಿ ಪಂಡಿತರಿಗೆ ನೀಡಲಾಗಿದೆ. ಆದುದರಿಂದ 370ನೇ ವಿಧಿ ರದ್ದತಿ ಹಾಗೂ ರಾಜ್ಯ ಸ್ಥಾನಮಾನ ಕಸಿದಿರುವುದು  ನಿಜವಾಗಿಯೂ ಬೇಸರದ ಸಂಗತಿ. ಕಾಂಗ್ರೆಸ್ ಪಕ್ಷ ಈ ವಿಚಾರವನ್ನು ಖಂಡಿತವಾಗಿಯೂ ಮರು ಪರಿಶೀಲಿಸಬೇಕಿದೆ" ಎಂದಿದ್ದರು.

ಇದೀಗ ಟೀಕೆಗಳಿಗೆ ಪ್ರತಿಕ್ರಿಯಿಸಿದ ಸಿಂಗ್ "ಪ್ರಾಯಶಃ ಕೆಲ ನಾಯಕರುಗಳಿಗೆ ʼshall' ಮತ್ತು ʼconsider' ಪದಗಳ ನಡುವಿನ  ವ್ಯತ್ಯಾಸ ತಿಳಿದಿಲ್ಲ. 370ನೇ ವಿಧಿ ರದ್ದತಿ ಮಾಡಿದ ರೀತಿಯನ್ನು ಕಾಂಗ್ರೆಸ್ ಪಕ್ಷ ಸಂಸತ್ತಿನಲ್ಲಿ ವಿರೋಧಿಸಿತ್ತು. ಜನರನ್ನು ಈ ನಿರ್ಧಾರದ ಭಾಗವಾಗಿಸಿರಲಿಲ್ಲ" ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News