×
Ad

ಆಯಿಶಾ ಸುಲ್ತಾನಾ ಜಾಮೀನು ಅರ್ಜಿ: ಲಕ್ಷದ್ವೀಪ ಪೊಲೀಸರ ಅಭಿಪ್ರಾಯ ಕೋರಿದ ಕೇರಳ ಹೈಕೋರ್ಟ್

Update: 2021-06-15 20:38 IST

ಕೊಚ್ಚಿ: ಲಕ್ಷ ದ್ವೀಪ ಪೊಲೀಸರು ತನ್ನ ವಿರುದ್ಧ ದಾಖಲಿಸಿರುವ ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿ ಚಲನಚಿತ್ರ ನಿರ್ಮಾಪಕಿ ಆಯಿಷಾ ಸುಲ್ತಾನಾ ಸಲ್ಲಿಸಿರುವ  ಜಾಮೀನು ಅರ್ಜಿಯ ಕುರಿತಾಗಿ  ಕೇರಳ ಹೈಕೋರ್ಟ್ ಮಂಗಳವಾರ ಲಕ್ಷದ್ವೀಪ ಪೊಲೀಸರ ಅಭಿಪ್ರಾಯ ಕೋರಿದೆ.

ಮನವಿಯನ್ನು ಪರಿಗಣಿಸಿದ ನ್ಯಾಯಾಲಯವು ತನ್ನ ಅಭಿಪ್ರಾಯವನ್ನು ತಿಳಿಸುವಂತೆ ಲಕ್ಷದ್ವೀಪ ಪೊಲೀಸರಿಗೆ ನಿರ್ದೇಶನ ನೀಡಿತು ಹಾಗೂ  ಹೆಚ್ಚಿನ ಪರಿಗಣನೆಗೆ ಗುರುವಾರ ವಿಚಾರಣೆಯನ್ನು ಮುಂದೂಡಿತು.

ವಿಚಾರಣೆಗಾಗಿ ಜೂನ್ 20 ರಂದು ಲಕ್ಷದ್ವೀಪದ ಕವರಟ್ಟಿಯಲ್ಲಿರುವ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಹಾಜರಾಗುವಂತೆ ತನಗೆ  ನಿರ್ದೇಶಿಸಲಾಗಿದೆ ಎಂದು ಸುಲ್ತಾನಾ ತನ್ನ ಮನವಿಯಲ್ಲಿ ತಿಳಿಸಿದ್ದಾರೆ. ತಾನು  ಕವರಟ್ಟಿ  ತಲುಪಿದರೆ ತನ್ನನ್ನು ಬಂಧಿಸುವ ಸಾಧ್ಯತೆಯಿದೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಟಿವಿ ಚರ್ಚೆಯ ಸಂದರ್ಭದಲ್ಲಿ ಕೇಂದ್ರಾಡಳಿತ ಪ್ರದೇಶದಲ್ಲಿ ಕೋವಿಡ್ -19 ಹರಡಿದ ಬಗ್ಗೆ ಆಡಳಿತಾಧಿಕಾರಿ ಪ್ರಫುಲ್‌ ಪಟೇಲ್‌ ಹಾಗೂ ಕೇಂದ್ರ ಸರಕಾರವನ್ನು ನಿಂದಿಸಿದ್ದಾರೆ ಎಂದು ಬಿಜೆಪಿ ಮುಖಂಡರೊಬ್ಬರು ನೀಡಿದ ದೂರಿನ ಹಿನ್ನೆಲೆಯಲ್ಲಿ ಸುಲ್ತಾನಾ ವಿರುದ್ಧ ಜೂನ್ 10 ರಂದು ದೇಶದ್ರೋಹ ಪ್ರಕರಣ ದಾಖಲಾಗಿತ್ತು. ಬಿಜೆಪಿಯ ಲಕ್ಷದ್ವೀಪ ಘಟಕದ ಅಧ್ಯಕ್ಷ ಅಬ್ದುಲ್ ಖಾದರ್ ಅವರು ದೂರು ದಾಖಲಿಸಿದ್ದಾರೆ. 

ಕವರಟ್ಟಿ ಪೊಲೀಸರು ದಾಖಲಿಸಿರುವ ಎಫ್ಐಆರ್ ಪ್ರಕಾರ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124 ಎ (ದೇಶದ್ರೋಹ) ಹಾಗೂ  153 ಬಿ (ದ್ವೇಷ ಭಾಷಣ) ಅಡಿಯಲ್ಲಿ ಚಲನಚಿತ್ರ ನಿರ್ಮಾಪಕಿಯ  ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News