ಪ್ಲಾಸ್ಟಿಕ್ ಸ್ಟೂಲ್, ಬುಟ್ಟಿಯನ್ನು ರಕ್ಷಾ ಕವಚವಾಗಿಸಿದ ಉತ್ತರ ಪ್ರದೇಶ ಪೊಲೀಸರನ್ನು ವ್ಯಂಗ್ಯವಾಡಿದ ಟ್ವಿಟ್ಟರಿಗರು

Update: 2021-06-17 12:07 GMT
photo: twitter

ಲಕ್ನೋ: ಪ್ರತಿಭಟನಾಕಾರರನ್ನು ನಿಭಾಯಿಸಲು ಉತ್ತರ ಪ್ರದೇಶ ಪೊಲೀಸರು ಪ್ಲಾಸ್ಟಿಕ್ ಸ್ಟೂಲ್ ಮತ್ತು ಬಿದಿರಿನ ಬುಟ್ಟಿ  ಬಳಸಿದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಪೊಲೀಸರು ಅಪಹಾಸ್ಯಕ್ಕೀಡಾಗುವಂತಾಗಿದೆ.

ಈ ಘಟನೆ ಉನ್ನಾವೋ ಜಿಲ್ಲೆಯಲ್ಲಿ ನಡೆದಿದೆಯೆನ್ನಲಾಗಿದೆ. ಅಕ್ರಂಪುರ್ ಗ್ರಾಮದಲ್ಲಿ ರಸ್ತೆ ಅಪಘಾತವೊಂದರಲ್ಲಿ ಇಬ್ಬರು ಮೃತಪಟ್ಟ ನಂತರ ನಡೆದ ಪ್ರತಿಭಟನೆಗಳ ವೇಳೆ ಪರಿಸ್ಥಿತಿ ಕೈಮೀರಿತ್ತೆನ್ನಲಾಗಿದ್ದು ಮಹಿಳೆಯರು ಪೊಲೀಸರತ್ತ ಕಲ್ಲು ತೂರಾಟ ನಡೆಸಿದಾಗ ಪೊಲೀಸರು ಈ ರೀತಿ ತಮ್ಮನ್ನು ರಕ್ಷಿಸಿಕೊಳ್ಳಬೇಕಾಯಿತೆನ್ನಲಾಗಿದೆ. ಒಬ್ಬ ಪೊಲೀಸ್ ಸಿಬ್ಬಂದಿ ತಲೆಗೆ ಕೆಂಪು ಬಣ್ಣದ ಪ್ಲಾಸ್ಟಿಕ್ ಸ್ಟೂಲ್ ಹಾಕಿದ್ದರೆ ಇನ್ನೊಬ್ಬರು ಬುಟ್ಟಿಯನ್ನು ರಕ್ಷಣೆಗಾಗಿ ಹಿಡಿದಿರುವುದು ಕಾಣಿಸುತ್ತದೆ.

ಘಟನೆಯಲ್ಲಿ 12  ಪೊಲೀಸರು ಗಾಯಗೊಂಡಿದ್ದು ಹಿಂಸೆಯಲ್ಲಿ ತೊಡಗಿದ 43 ಮಂದಿಯನ್ನು ಬಂಧಿಸಲಾಗಿದೆ ಹಾಗೂ 100 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದು 250 ಹೆಸರಿಸಲ್ಪಡದ ಜನರನ್ನು ಕೂಡ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪೊಲೀಸರ ಫೋಟೋ ಕುರಿತಂತೆ ಟ್ವಿಟ್ಟರಿಗರು ಸ್ವಾರಸ್ಯಕರವಾಗಿ ಟ್ವೀಟ್ ಮಾಡಿದ್ದಾರೆ.

"ಉತ್ತರ ಪ್ರದೇಶ ಪೊಲೀಸರ ವೃತ್ತಿಪರತೆ ದಂಗಾಗಿಸುತ್ತದೆ" ಎಂದು ರೋಹಿಣಿ ಸಿಂಗ್ ಎಂಬವರು ಟ್ವೀಟ್ ಮಾಡಿದ್ದರೆ "ಯೋಗಿ ಸರಕಾರ ಎಷ್ಟೊಂದು ವೃತ್ತಿಪರ ಪೊಲೀಸ್ ಪಡೆಯನ್ನು ಬೆಳೆಸಿದೆ" ಎಂದು ಪತ್ರಕರ್ತೆ ಸ್ವಾತಿ ಚತುರ್ವೇದಿ ವ್ಯಂಗ್ಯವಾಡಿದ್ದಾರೆ.

"ಉತ್ತರ ಪ್ರದೇಶ ಪೊಲೀಸರಿಂದ ವಿಶ್ವ ದರ್ಜೆಯ ರಕ್ಷಣಾ ವ್ಯವಸ್ಥೆ" ಎಂದು ಇನ್ನೊಬ್ಬರು ಟ್ವಿಟ್ಟರಿಗರು ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News