ಕುಂಭಮೇಳ: ನಕಲಿ ಕೋವಿಡ್ ಪರೀಕ್ಷೆ ಹಗರಣದ ಕುರಿತು ಪ್ರಕರಣ ದಾಖಲಿಸಲು ಉತ್ತರಾಖಂಡ ಸರಕಾರ ಆದೇಶ

Update: 2021-06-17 15:22 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಜೂ. 17: ಕುಂಭಮೇಳದ ಸಂದರ್ಭ ನಕಲಿ ಕೋವಿಡ್ ಪರೀಕ್ಷೆ ನಡೆಸಿದ ಆರೋಪದ ಕುರಿತಂತೆ ಖಾಸಗಿ ಪ್ರಯೋಗಾಲಯಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಉತ್ತರಾಖಂಡ ಸರಕಾರ ಹರಿದ್ವಾರ ಜಿಲ್ಲಾಡಳಿತಕ್ಕೆ ನಿರ್ದೇಶಿಸಿದೆ.

ಎಪ್ರಿಲ್ 1ರಿಂದ 30ರ ವರೆಗೆ ನಡೆದ ಜಗತ್ತಿನ ಅತಿ ದೊಡ್ಡ ಧಾರ್ಮಿಕ ಸಭೆಗಳಲ್ಲಿ ಒಂದಾದ ಕುಂಭಮೇಳದ ಸಂದರ್ಭ ರಾಜ್ಯ ಸರಕಾರದಿಂದ ನಿಯೋಜಿತ ಮುಖ್ಯವಾಗಿ ದಿಲ್ಲಿ, ಹರ್ಯಾಣ ಮೂಲದ ಖಾಸಗಿ ಪ್ರಯೋಗಾಲಯಗಳು ಕೋವಿಡ್ ಪರೀಕ್ಷೆ ನಡೆಸಿತ್ತು. 

‘‘ಕುಂಭಮೇಳದ ಸಂದರ್ಭ ನಡೆಸಲಾದ ಕೋವಿಡ್ ಪರೀಕ್ಷೆ ಹಗರಣದ ಕುರಿತು ಎಫ್ಐಆರ್ ದಾಖಲಿಸುವಂತೆ ಉತ್ತರಾಖಂಡ ಸರಕಾರ ಹರಿದ್ವಾರ ಜಿಲ್ಲಾಡಳಿತಕ್ಕೆ ಆದೇಶಿಸಿದೆ. ಕುಂಭಮೇಳದ ಸಂದರ್ಭ ಹರಿದ್ವಾರದ 5 ಸ್ಥಳಗಳಲ್ಲಿ ಕೋವಿಡ್ ಪರೀಕ್ಷೆ ನಡೆಸಿದ ದಿಲ್ಲಿ ಹಾಗೂ ಹರ್ಯಾಣದ ಪ್ರಯೋಗಾಲಯಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಆದೇಶ ಜಾರಿಗೊಳಿಸಲಾಗಿದೆ’’ ಎಂದು ರಾಜ್ಯ ಸರಕಾರದ ವಕ್ತಾರ ಸುಬೋಧ್ ಉನಿಯಾಲ್ ತಿಳಿಸಿದ್ದಾರೆ.

ಕುಂಭಮೇಳದ ಸಂದರ್ಭ 1 ಲಕ್ಷಕ್ಕೂ ಅಧಿಕ ನಕಲಿ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ವರದಿಯಾದ ಬಳಿಕ ಕಳೆದ ವಾರ ಹರಿದ್ವಾರ ಜಿಲ್ಲಾಡಳಿತ ತನಿಖೆಗೆ ಆದೇಶ ನೀಡಿತ್ತು.

ಉತ್ತರಾಖಂಡ ಉಚ್ಚ ನ್ಯಾಯಾಲಯ ನಿಗದಿಪಡಿಸಿದ ದೈನಂದಿನ 50 ಸಾವಿರ ಕೋವಿಡ್ ಪರೀಕ್ಷೆಗಳ ಕೋಟಾಗಳನ್ನು ಪೂರೈಸಲು ಪ್ರಯೋಗಾಲಯಗಳು ನಕಲಿ ಕೋವಿಡ್ ಪರೀಕ್ಷೆ ನಡೆಸಿರುವುದು ಸ್ಪಷ್ಟ ಎಂದು ವರದಿ ಹೇಳಿದೆ. ತನಿಖೆಯ ಕಾರಣಕ್ಕೆ ಕುಂಭಮೇಳವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ ಸಂದರ್ಭ ಆರ್ಟಿ-ಪಿಸಿಆರ್ ಹಾಗೂ ರ್ಯಾಪಿಡ್ ಆ್ಯಂಟಿಜನ್ ಪರೀಕ್ಷೆಗಳನ್ನು ನಡೆಸುವ ಜವಾಬ್ದಾರಿಯನ್ನು ವಹಿಸಲಾಗಿದ್ದ ಎಲ್ಲಾ ಪ್ರಯೋಗಾಲಯಗಳಿಗೆ ಶುಲ್ಕ ಪಾವತಿಸಲಾಗಿದೆ ಎಂದು ಹರಿದ್ವಾರದ ಜಿಲ್ಲಾ ದಂಡಾಧಿಕಾರಿ ಸಿ. ರವಿಶಂಕರ್ ಹೇಳಿದ್ದರು. 

ಕುಂಭಮೇಳದ ಸಂದರ್ಭ ಕೋವಿಡ್ ಪರೀಕ್ಷೆ ನಡೆಸಲು 22 ಖಾಸಗಿ ಪ್ರಯೋಗಾಲಯಗಳನ್ನು ನೇಮಕ ಮಾಡಲಾಗಿತ್ತು. ಕೋವಿಡ್ ಪ್ರಕರಣಗಳ ಸಂಖ್ಯೆ ತೀವ್ರಗತಿಯಲ್ಲಿ ಏರುತ್ತಿರುವ ಸಂದರ್ಭ ದೇಶದ ವಿವಿಧ ಭಾಗಗಳಿಂದ ದೊಡ್ಡ ಸಂಖ್ಯೆಯಲ್ಲಿ ಜನರು ಪಾಲ್ಗೊಂಡ ಕುಂಭಮೇಳವನ್ನು ನಡೆಸಲಾಗಿತ್ತು. ಹರಿದ್ವಾರದಲ್ಲಿ ನಡೆದ ಕುಂಭಮೇಳದಲ್ಲಿ ಕನಿಷ್ಠ 70 ಲಕ್ಷ ಭಕ್ತರು ಪಾಲ್ಗೊಂಡಿದ್ದಾರೆ ಎಂದು ಭಾವಿಸಲಾಗಿದೆ. ಕುಂಭಮೇಳದ ಸಂದರ್ಭ ವೈದ್ಯಕೀಯ ಸಿಬ್ಬಂದಿ ನಡೆಸಿದ ಸುಮಾರು 2 ಲಕ್ಷ ಕೋವಿಡ್ ಪರೀಕ್ಷೆಯಲ್ಲಿ ಸುಮಾರು 2,600 ಭಕ್ತರ ವರದಿ ಪಾಸಿಟಿವ್ ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News