ಅಂಬಾನಿಗೆ ಬಾಂಬ್ ಬೆದರಿಕೆ ಪ್ರಕರಣ: ಮುಂಬೈ ಪೊಲೀಸ್ ನ ಮಾಜಿ ‘ಎನ್ ಕೌಂಟರ್ ಸ್ಪೆಶಲಿಸ್ಟ್‌’ ಬಂಧನ

Update: 2021-06-17 15:49 GMT

ಮುಂಬೈ, ಜೂ. 17: ಮುಖೇಶ್ ಅಂಬಾನಿ ಅವರಿಗೆ ಬಾಂಬ್ ಬೆದರಿಕೆ ಪ್ರಕರಣದ ತನಿಖೆಗೆ ಸಂಬಂಧಿಸಿ ಮುಂಬೈ ಪೊಲೀಸ್ ನ ಮಾಜಿ ‘ಎನ್ಕೌಂಟರ್ ಸ್ಪೆಷಲಿಸ್ಟ್’ ಪ್ರದೀಪ್ ಶರ್ಮಾ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಬಂಧಿಸಿದೆ. ಮುಂಬೈಯ ಅಂಧೇರಿಯಲ್ಲಿರುವ ಶರ್ಮಾ ಅವರ ನಿವಾಸದ ಮೇಲೆ ಮುಂಜಾನೆ 5 ಗಂಟೆಗೆ ಎನ್ಐಎ ಹಾಗೂ ಸಿಆರ್ಪಿಎಫ್ (ಕೇಂದ್ರ ಮೀಸಲು ಪೊಲೀಸ್ ಪಡೆ) ಸಿಬ್ಬಂದಿ ದಾಳಿ ನಡೆಸಿದರು. 

ಬಳಿಕ ಶರ್ಮಾ ಅವರನ್ನು ಬಂಧಿಸಿ ಎನ್ಐಎ ಕಚೇರಿಗೆ ಕರೆದೊಯ್ದು ವಿಚಾರಣೆ ನಡೆಸಿದರು ಎಂದು ಮೂಲಗಳು ತಿಳಿಸಿವೆ. ಪ್ರದೀಪ್ ಶರ್ಮಾ ಹಾಗೂ ಈ ವಾರ ಬಂಧಿತನಾಗಿ ಜೂನ್ 21ರ ವರೆಗೆ ಎನ್ಐಎ ಕಸ್ಟಡಿಯಲ್ಲಿರುವ ಸಂತೋಷ್ ಶೆಲಾರ್ ನಡುವೆ ನಂಟು ಇರುವ ಸಾಧ್ಯತೆ ಬಗ್ಗೆ ಸಂದೇಹ ವ್ಯಕ್ತವಾದ ಬಳಿಕ ಈ ದಾಳಿ ನಡೆಸಲಾಗಿದೆ. ಶರ್ಮಾ ಹಾಗೂ ಶೆಲಾರ್ ಅವರು ಜೊತೆಗಿದ್ದ ಭಾವಚಿತ್ರ ಈ ಸಂದೇಹ ಮೂಡುವಂತೆ ಮಾಡಿದೆ.
 
ಆದರೆ, ಭಾವಚಿತ್ರದ ಕಾರಣಕ್ಕೆ ಶೆಲಾರ್ನೊಂದಿಗೆ ನಂಟು ಇದೆ ಎಂಬ ಆರೋಪವನ್ನು ಶರ್ಮಾ ನಿರಾಕರಿಸಿದ್ದಾರೆ. ಶೆಲಾರ್ ಅವರು ಪೊಲೀಸ್ ಮಾಹಿತಿದಾರ ಎಂದು ಅವರು ಹೇಳಿದ್ದಾರೆ. ಶೆಲಾರ್ ಸಾವಿರಾರು ಜನರೊಂದಿಗೆ ಭಾವಚಿತ್ರ ತೆಗಿಸಿಕೊಂಡಿದ್ದಾರೆ. ಅಂದ ಮಾತ್ರಕ್ಕೆ ಶೆಲಾರ್ ಗೂ ತನಗೂ ಸಂಬಂಧ ಇದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಶರ್ಮಾ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News