ಲಕ್ಷದ್ವೀಪದ ಕಾನೂನು ವ್ಯಾಪ್ತಿಯನ್ನು ಕೇರಳ ಹೈಕೋರ್ಟ್‌ ನಿಂದ ಕರ್ನಾಟಕಕ್ಕೆ ಬದಲಾಯಿಸಲು ಆಡಳಿತದಿಂದ ಪ್ರಸ್ತಾವ

Update: 2021-06-20 17:35 GMT
Photo: Twitter

ಕೊಚ್ಚಿ/ಹೊಸದಿಲ್ಲಿ,ಜೂ.21: ತನ್ನ ಕೆಲವು ವಿವಾದಾತ್ಮಕ ನಿರ್ಧಾರಗಳ ವಿರುದ್ಧ ದ್ವೀಪವಾಸಿಗಳ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಪ್ರಫುಲ್ ಪಟೇಲ್ ನೇತೃತ್ವದ ಲಕ್ಷದ್ವೀಪ ಆಡಳಿತವು ತನ್ನ ನ್ಯಾಯಾಂಗ ಕಾರ್ಯವ್ಯಾಪ್ತಿಯನ್ನು ಕೇರಳ ಹೈಕೋರ್ಟ್‌ನಿಂದ ಕರ್ನಾಟಕ ಹೈಕೋರ್ಟ್ ಗೆ ವರ್ಗಾಯಿಸುವ ಪ್ರಸ್ತಾವವನ್ನು ಮುಂದಿರಿಸಿದೆಯೆಂದು ಅಧಿಕೃತ ಮೂಲಗಳು ತಿಳಿಸಿವೆ.
 
ಪ್ರಫುಲ್ ಪಟೇಲ್ ಅವರು ಕೈಗೊಂಡಿರುವ ನಿರ್ಧಾರಗಳ ವಿರುದ್ಧ ಕೇರಳ ಹೈಕೋರ್ಟ್‌ನಲ್ಲಿ  ಹಲವಾರು ದಾವೆಗಳು ಸಲ್ಲಿಕೆಯಾದ ಬಳಿಕಲಕ್ಷದ್ವೀಪ ಆಡಳಿತವು ಈ ಪ್ರಸ್ತಾವವನ್ನು ಮುಂದಿರಿಸಿದೆ ಎನ್ನಲಾಗಿದೆ.

ಲಕ್ಷದ್ವೀಪದಲ್ಲಿ ಗೂಂಡಾ ಕಾಯ್ದೆ ಜಾರಿ ಹಾಗೂ ಮೀನುಗಾರ ಗುಡಿಸಲುಗಳ ನಾಶ ಹಾಗೂ ರಸ್ತೆಗಳ ಅಗಲೀಕರಣ ಸೇರಿದಂತೆ ಲಕ್ಷದ್ವೀಪ ಆಡಳಿತದ ಹಲವಾರು ವಿವಾದಾತ್ಮಕ ನಿರ್ಧಾರಗಳ ವಿರುದ್ಧ ದ್ವೀಪವಾಸಿಗಳು ನಿರಂತರವಾಗಿ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.
 ಅನಾರೋಗ್ಯದಿಂದಾಗಿ ಲಕ್ಷದ್ವೀಪದ ಆಡಳಿತಗಾರ ದಿನೇಶ್ವರ್ ಶರ್ಮಾ ನಿಧನದ ಬಳಿಕ ಪ್ರಫುಲ್ ಪಟೇಲ್ ಅವರಿಗೆ ಈ ದ್ವೀಪದ ಹೆಚ್ಚುವರಿ ಉಸ್ತುವಾರಿ ನೀಡಲಾಗಿತ್ತು.
 
ಲಕ್ಷದೀಪದ ಆಡಳಿತಗಾರರ ವಿರುದ್ಧ ಈವರೆಗೆ ಕೇರಳ ಹೈಕೋರ್ಟ್ನಲ್ಲಿ 11 ರಿಟ್ ಅರ್ಜಿಗಳು ಸೇರಿದಂತೆ 23 ದಾವೆಗಳು ಸಲ್ಲಿಕೆಯಾಗಿದೆ. ಪೊಲೀಸರು ಹಾಗೂ ದ್ವೀಪಪ್ರದೇಶದ ಸರಕಾರದ ವಿರುದ್ಧವೂ ಅರ್ಜಿ ಸಲ್ಲಿಕೆಯಾಗಿವೆ.
   
ಲಕ್ಷದ್ವೀಪದ ನ್ಯಾಯಾಂಗ ಕಾರ್ಯವ್ಯಾಪ್ತಿಯನ್ನು ಕೇರಳ ಹೈಕೋರ್ಟ್ನಿಂದ ಕರ್ನಾಟಕ ಹೈಕೋರ್ಟ್ ಗೆ ವರ್ಗಾಯಿಸುವ ಲಕ್ಷದ್ವೀಪದ ಆಡಳಿತ ಪ್ರಸ್ತಾವನೆಯ ಕುರಿತಾಗಿ ಪ್ರಫುಲ್ ಪಟೇಲ್ ಅವರ ಸಲಹೆಗಾರ ಎ.ಅನ್ಬರಸು ಹಾಗೂ ಲಕ್ಷದ್ವೀಪದ ಕಲೆಕ್ಟರ್ ಎಸ್.ಆಸ್ಗರ್ ಅವರನ್ನು ಸಂಪರ್ಕಿಸಲು ಸುದ್ದಿಸಂಸ್ಥೆಗಳು ನಡೆಸಿದ ಪ್ರಯತ್ನಗಳು ವಿಫಲವಾಗಿವೆ.
 
ಸಂವಿಧಾನದ 241ನೇ ವಿಧಿ ಪ್ರಕಾರ ಲಕ್ಷದ್ವೀಪ ಕೇಂದ್ರಾ ಡಳಿತಪ್ರದೇಶವಾಗಿರುವುದರಿಂದ ಸಂಸತ್ನಲ್ಲಿ ಕಾಯ್ದೆಯನ್ನು ಅಂಗೀಕರಿಸುವ ಮೂಲಕ ಮಾತ್ರವೇ  ಹೈಕೋರ್ಟ್ ಕಾರ್ಯವ್ಯಾಪ್ತಿಯನ್ನು ವರ್ಗಾಯಿಸಬಹುದೆಂದು ಕಾನೂನು ತಜ್ಞರು ಅಭಿಪ್ರಾಯಿಸಿದ್ದಾರೆಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ.
 
ಲಕ್ಷದ್ವೀಪದ ನ್ಯಾಯಾಂಗ ಕಾರ್ಯವ್ಯಾಪ್ತಿಯನ್ನು ಕೇರಳದಿಂದ ಕರ್ನಾಟಕಕ್ಕೆ ವರ್ಗಾಯಿಸುವ ಪ್ರಫುಲ್ ಪಟೇಲ್ ಅವರ ಪ್ರಯತ್ನವನ್ನು ತಾನು ತೀವ್ರವಾಗಿ ವಿರೋಧಿಸುವುದಾಗಿ ಲಕ್ಷದ್ವೀಪದ ಲೋಕಸಭಾ ಸದಸ್ಯ ಮೊಹಮ್ಮದ್ ಫೈಝಲ್ ಪಿ.ಪಿ.ತಿಳಿಸಿದ್ದಾರೆ.ದೀಪದಪ್ರದೇಶವಾದ ಲಕ್ಷದ್ವೀಪದ ಜನರ ಮಾತೃಭಾಷೆ ಮಲಯಾಳಂ ಆಗಿದ್ದು, ಪ್ರಫುಲ್ ಅವರು ಸಂಪೂರ್ಣವಾಗಿ ತನ್ನ ಹುದ್ದೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆವರು ಆಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News