2010ರ ರೈಲು ದುರಂತದ 'ಮೃತ' ವ್ಯಕ್ತಿ ಜೀವಂತವಾಗಿ ಪತ್ತೆ

Update: 2021-06-20 17:31 GMT

ಕೋಲ್ಕತಾ, ಜೂ. 20: ಪಶ್ಚಿಮಬಂಗಾಳದಲ್ಲಿ ಜ್ಞಾನೇಶ್ವರಿ ಎಕ್ಸ್ಪ್ರೆಸ್ ರೈಲ ಹಳ್ಳಿ ತಪ್ಪಿ ಸಂಭವಿಸಿದ ದುರಂತದಲ್ಲಿ ಮೃತಪಟ್ಟನೆಂದು ಹೇಳಲಾದ ವ್ಯಕ್ತಿ ಈಗ ಜೀವಂತವಾಗಿ ಪತ್ತೆಯಾಗಿದ್ದಾನೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ದುರಂತಕ್ಕೆ ಸಂಬಂಧಿಸಿ ಪರಿಹಾರಾರ್ಥ ಉದ್ಯೋಗ ಪಡೆದುಕೊಂಡ ಆತನ ತಂಗಿ ಹಾಗೂ ತಂದೆಯನ್ನು ಕರೆದು ವಿಚಾರಣೆ ನಡೆಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

2020 ಮೇಯಲ್ಲಿ ಜಾರ್ ಗಾಂವ್ ನ ಸಾರ್ಡಿಹದಲ್ಲಿ ಹೌರಹ್-ಮುಂಬೈ ಜ್ಞಾನೇಶ್ವರಿ ಎಕ್ಸ್ಪ್ರೆಸ್ನ ಹಲವು ಬೋಗಿಗಳು ಹಳಿ ತಪ್ಪಿತ್ತು. ಇದೇ ಸಂದರ್ಭ ಎದುರು ದಿಕ್ಕಿನಿಂದ ಬಂದ ಗೂಡ್ಸ್ ರೈಲು ಢಿಕ್ಕಿ ಹೊಡೆದಿತ್ತು. ಈ ಘಟನೆಯಲ್ಲಿ ಕನಿಷ್ಠ 148 ಜನರು ಸಾವನ್ನಪ್ಪಿದ್ದರು.

ಆಗ ಈ ಪ್ರದೇಶ ಮಾವೋವಾದಿಗಳ ಹಿಡಿತಕ್ಕೆ ಒಳಪಟ್ಟಿತ್ತು. ಈ ವಿಧ್ವಂಸಕ ಕೃತ್ಯವನ್ನು ಮಾವೋವಾದಿಗಳು ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು.

ದುರಂತದಲ್ಲಿ ತನ್ನ ಪುತ್ರ ಸಾವನ್ನಪ್ಪಿದ್ದಾನೆ ಎಂದು ಕೊಲ್ಕೊತ್ತಾದ ವ್ಯಕ್ತಿ ಪ್ರತಿಪಾದಿಸಿದ್ದರು. ಅನಂತರ ಡಿಎನ್ಎ ಮಾದರಿ ಮೂಲಕ ಮೃತದೇಹವನ್ನು ಗುರುತಿಸಲಾಗಿತ್ತು ಎಂದು ಆಗ್ನೇಯ ರೈಲ್ವೆಯ ಅಧಿಕಾರಿಗಳು ತಿಳಿಸಿದ್ದಾರೆ.

ದುರಂತದ ಬಳಿಕ ರೈಲ್ವೆಯ ಘೋಷಣೆಯಂತೆ ಆರ್ಥಿಕ ಪರಿಹಾರದೊಂದಿಗೆ ಮೃತಪಟ್ಟ ವ್ಯಕ್ತಿಯ ಕುಟುಂಬದ ಸದಸ್ಯೆಗೆ ಉದ್ಯೋಗ ನೀಡಲಾಗಿತ್ತು ಎಂದು ಅವರು ಹೇಳಿದ್ದಾರೆ.

ವ್ಯಕ್ತಿಯ ಸಹೋದರಿ ಪೂರ್ವ ರೈಲ್ವೆಯ ಸಿಯಾಲ್ದಾಹ್ ವಿಭಾಗದಲ್ಲಿ ಸಿಗ್ನಲ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಇನ್ನೋರ್ವ ಅಧಿಕಾರಿ ತಿಳಿಸಿದ್ದಾರೆ.

ದುರಂತದಲ್ಲಿ ಮೃತಪಟ್ಟಿದ್ದಾನೆ ಎಂದು ಹೇಳಲಾದ ವ್ಯಕ್ತಿ ಜೀವಂತ ಇದ್ದಾನೆ ಎಂಬ ದೂರು ಸ್ವೀಕರಿಸಿದ ಬಳಿಕ ರೈಲ್ವೆಯ ವಿಚಕ್ಷಣಾ ಇಲಾಖೆ ತನಿಖೆ ನಡೆಸಿತ್ತು ಹಾಗೂ ಆರೋಪದಲ್ಲಿ ಸತ್ಯ ಇದೆ ಎಂದು ಕಂಡುಕೊಂಡಿತ್ತು. ಅಲ್ಲದೆ ಪ್ರಕರಣವನ್ನು ಸಿಬಿಐ ತನಿಖೆಗೆ ಶಿಫಾರಸು ಮಾಡಿತ್ತು ಎಂದು ಆಗ್ನೇಯ ರೈಲ್ವೆಯ ಅಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News